Uber Parcel ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಿಗ್ ಕಾರ್ಮಿಕರು ಹಾಗೂ ಡೆಲಿವರಿ ಏಜೆಂಟ್‌ಗಳ ಸುರಕ್ಷತೆ ಮತ್ತು ನಡವಳಿಕೆಯ ಬಗ್ಗೆ ಮತ್ತೆ ಪ್ರಶ್ನೆಗಳು ಏಳುವಂತೆ ಮಾಡುವ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಪಾರ್ಸೆಲ್ ಸಂಗ್ರಹಿಸಲು ಬಂದ 'ಉಬರ್ ಪಾರ್ಸೆಲ್' (Uber Parcel) ಚಾಲಕನೊಬ್ಬ ಸಂಪೂರ್ಣ ಮದ್ಯಪಾನ ಮಾಡಿ, ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಅನುಭವವನ್ನು ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಒಬ್ಬರು ಹಂಚಿಕೊಂಡಿದ್ದಾರೆ.
ಯುವತಿ ವಿಡಿಯೋದಲ್ಲಿ ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇನ್‌ಸ್ಟಾಗ್ರಾಮ್ ಕ್ರಿಯೇಟರ್ ಅನೇರಿ ಠಾಕ್ಕರ್, ತಮಗಾದ ದುರನುಭವವನ್ನು ಹಂಚಿಕೊಂಡಿದ್ದಾರೆ. "ನನ್ನ ಮನೆಗೆ ಬಂದಿದ್ದ ಸ್ನೇಹಿತೆಯೊಬ್ಬರು ತಮ್ಮ ಜಾಕೆಟ್ ಮರೆತು ಹೋಗಿದ್ದರು. ಅದನ್ನು ಅವರಿಗೆ ಹಿಂತಿರುಗಿಸಲು ರಾತ್ರಿ 9:30 ರ ಸುಮಾರಿಗೆ ನಾನು ಉಬರ್ ಪಾರ್ಸೆಲ್ ಸೇವೆಯನ್ನು ಬುಕ್ ಮಾಡಿದ್ದೆ" ಎಂದು ಅವರು ತಿಳಿಸಿದ್ದಾರೆ.
ಮೊಬೈಲ್ ಚಾರ್ಜ್, ಸಿಗರೇಟ್ ನೆಪ!
ಪಾರ್ಸೆಲ್ ಪಡೆಯಲು ಬಂದ ಡೆಲಿವರಿ ಬಾಯ್, ಮೊದಲು ಪಾರ್ಸೆಲ್ ತೆಗೆದುಕೊಂಡಿದ್ದಾನೆ. ಇದಾದ ಬಳಿಕ "ನನ್ನ ಫೋನ್‌ನಲ್ಲಿ ಚಾರ್ಜ್ ಕಡಿಮೆಯಿದೆ, ಪಾರ್ಸೆಲ್ ತಲುಪಿಸಬೇಕಾದ ಸ್ಥಳ ದೂರವಿದೆ. ಹಾಗಾಗಿ ಸ್ವಲ್ಪ ಸಮಯ ಮೊಬೈಲ್ ಚಾರ್ಜ್ ಮಾಡಲು ಮನೆ ಒಳಗೆ ಬಿಡಿ" ಎಂದು ಕೇಳಿಕೊಂಡಿದ್ದಾನೆ. ಯುವತಿ ಇದಕ್ಕೆ ಒಪ್ಪಿದಾಗ, ಆ ವ್ಯಕ್ತಿ ಮತ್ತಷ್ಟು ಮುಂದುವರಿದು ನಿಮ್ಮ ಮನೆಯ ಬಾಲ್ಕನಿಯಲ್ಲಿ ಸಿಗರೇಟ್ ಸೇದಲು ಅವಕಾಶ ಕೊಡಿ ಎಂದು ಮನೆ ಪ್ರವೇಶಿಸಲು ಯತ್ನಿಸಿದ್ದಾನೆ. ಆದರೆ ಯುವತಿ "ಮನೆಯಲ್ಲಿ ಸ್ನೇಹಿತ ನಿದ್ರಿಸುತ್ತಿದ್ದಾನೆ, ಒಳಗೆ ಬರಲು ಸಾಧ್ಯವಿಲ್ಲ" ಎಂದು ನಿರಾಕರಿಸಿದ್ದಾರೆ.
45% ಚಾರ್ಜ್ ಇದ್ದರೂ ಅನುಮಾನಸ್ಪದ ನಡವಳಿಕೆ!
ಆತನ ಫೋನ್‌ನಲ್ಲಿ ಶೇ. 45 ರಷ್ಟು ಬ್ಯಾಟರಿ ಚಾರ್ಜ್ ಇದ್ದರೂ, ಆತನ ನಿಜವಾದ ಉದ್ದೇಶವೇ ಬೇರೆಯಾಗಿತ್ತು ಎಂಬುದು ಯುವತಿಯ ಅನುಮಾನಕ್ಕೆ ಕಾರಣವಾಯಿತು. ಪರಿಸ್ಥಿತಿಯ ಗಂಭೀರತೆ ಅರಿತ ಯುವತಿ ತಕ್ಷಣವೇ ತಮ್ಮ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್‌ಗೆ ಮೇಲೆ ಬರುವಂತೆ ತಿಳಿಸಿದ್ದಾರೆ.
ಮೊಬೈಲ್ ಸಂಖ್ಯೆಗಾಗಿ ಪಟ್ಟು!
ಆ್ಯಪ್‌ನಲ್ಲಿ ಈಗಾಗಲೇ ಗ್ರಾಹಕರ ಮೊಬೈಲ್ ಸಂಖ್ಯೆ ನೋಂದಣಿಯಾಗಿದ್ದರೂ, ಆ ವ್ಯಕ್ತಿ ಯುವತಿಯ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ನೀಡುವಂತೆ ಪಟ್ಟು ಹಿಡಿದಿದ್ದಾನೆ. ಉಬರ್ ಆ್ಯಪ್‌ನಲ್ಲಿ ಗ್ರಾಹಕರ ಸಂಖ್ಯೆಗಳು ಎನ್‌ಕ್ರಿಪ್ಟ್ ಆಗಿರುವುದರಿಂದ ನೇರ ಕರೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತೇ ಆತ ಸಂಖ್ಯೆ ಕೇಳುತ್ತಿದ್ದಾನೆ ಎಂಬುದು ಯುವತಿಯ ಶಂಕೆಯಾಗಿತ್ತು. ಆದರೆ ಆತನ ನಡವಳಿಕೆಯಿಂದ ತೀವ್ರ ಭಯಭೀತಳಾದ ಯುವತಿ ಅನಿವಾರ್ಯವಾಗಿ ತನ್ನ ಸಂಖ್ಯೆಯನ್ನು ನೀಡಿದ್ದಾಗಿ ಹೇಳಿದ್ದಾರೆ.
ಆ ವ್ಯಕ್ತಿ ಸಂಪೂರ್ಣವಾಗಿ ಮದ್ಯಪಾನ ಮಾಡಿದ್ದ. ಎರಡು ಮೀಟರ್ ದೂರದಲ್ಲಿದ್ದರೂ ಆತನಿಂದ ತೀವ್ರ ಮದ್ಯದ ವಾಸನೆ ಬರುತ್ತಿತ್ತು ಎಂದು ಯುವತಿ ಆರೋಪಿಸಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಉಬರ್ ಇನ್ನೂ ಪ್ರತಿಕ್ರಿಯಿಸಿಲ್ಲ
ಪಾರ್ಸೆಲ್ ಸಂಗ್ರಹಿಸಲು ಬಂದ ಡೆಲಿವರಿ ಚಾಲಕನ ಅಸಭ್ಯ ವರ್ತನೆಯಿಂದ ಆತಂಕಗೊಂಡ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್, ಘಟನೆಯನ್ನು ತಕ್ಷಣವೇ ಗಂಭೀರವಾಗಿ ಪರಿಶೀಲಿಸುವಂತೆ ಉಬರ್ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ. ಚಾಲಕನಿಗೆ ಸದ್ಯ 'ಸಂಶಯದ ಲಾಭ' ನೀಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿರುವ ಯುವತಿ, ಸಂಸ್ಥೆಯು ಚಾಲಕರ ಭದ್ರತೆ ಹಾಗೂ ನಡವಳಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು, ಈ ಲೇಖನ ಪ್ರಕಟವಾಗುವವರೆಗೂ ಉಬರ್ ಸಂಸ್ಥೆಯು ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕ ಸ್ಪಷ್ಟನೆ ನೀಡಿಲ್ಲ (ಏಜೆನ್ಸೀಸ್).