ಚಿತ್ತಾಪುರ ತಾಲೂಕಿನ ದಂಡಗುಂಡದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಮಾತನಾಡಿದರು. ಭೀಮಣ್ಣ ಸಾಲಿ, ಚಂದ್ರಶೇಖರ ಅವಂಟಿ, ಮಹಾಂತಗೌಡ ಪಾಟೀಲ್​, ರಾಜಶೇಖರಗೌಡ ಪಾಟೀಲ್​, ಮಹಾಂತಗೌಡ ಪಾಟೀಲ್​, ಶಂಕರಗೌಡ ಪಾಟೀಲ್​, ಎಸ್​.ಸಿ.ಪಾಟೀಲ್​, ಮಂಜುನಾಥರೆಡ್ಡಿ ಇದ್ದರು.  
ರಾಜ್ಯ

ದಂಡಗುಂಡ ಬಸವಣ್ಣ ರಥೋತ್ಸವ 31ಕ್ಕೆ

ಪ್ರಮುಖ ಮುಖ್ಯಾಂಶಗಳು

  • ಡಾ.ಬಿ.ಜಿ.ಪಾಟೀಲ್​ ಹೇಳಿಕೆ
  • ಯಾತ್ರಿ ನಿವಾಸದಲ್ಲಿ ಪೂರ್ವಭಾವಿ ಸಭೆ
ಚಿತ್ತಾಪುರ: ದಂಡಗುಂಡದಲ್ಲಿ ಶ್ರೀ ಬಸವಣ್ಣ ಜಾತ್ರೆ ನಿಮಿತ್ತ ಆ.31ರಂದು ಅದ್ದೂರಿಯಾಗಿ ಮಹಾರಥೋತ್ಸವ ನಡೆಯಲಿದೆ. ಇದಕ್ಕಾಗಿ ಈಗಾಗಲೇ ದೇವಸ್ಥಾನ ಸಮಿತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀ ದಂಡಗುಂಡ ಬಸವಣ್ಣ ದೇವಸ್ಥಾನ ಟ್ರಸ್ಟ್​ ಉಪಾಧ್ಯಕ್ಷರಾದ ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಹೇಳಿದರು.
ದಂಡಗುಂಡ ಬಸವಣ್ಣ ದೇವಸ್ಥಾನದ ಯಾತ್ರಿ ನಿವಾಸದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶ್ರಾವಣದ ನಡುವಿನ ಸೋಮವಾರದಂದು ಬಸವಣ್ಣನ ಜಾತ್ರೆ ಜರುಗಲಿದೆ. ಜಾತ್ರೆಗೆ ಆಗಮಿಸುವ ಜನರಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ವಿದ್ಯುತ್​ ಸಂಪರ್ಕದ ಸಮಸ್ಯೆ ಆಗದಿರಲಿ. ಮಹಾರಥಕ್ಕೆ ವೈಭವದ ಅಲಂಕಾರ ಮಾಡಬೇಕು. ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ದಾಸೋಹ ವ್ಯವಸ್ಥೆ ಶುಚಿ, ರುಚಿಯಾಗಿರಬೇಕು. ಸುಗಮ ಉತ್ಸವಕ್ಕೆ ಭಕ್ತರ ಸಹಕಾರವೂ ಅಗತ್ಯವಾಗಿದೆ ಎಂದರು.
ದೇವಸ್ಥಾನ ಟ್ರಸ್ಟ್​ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ಮಾತನಾಡಿ, ಕಳೆದ ಅಮಾವ್ಯಾಸೆಯಂದು ದೇವಸ್ಥಾನದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಹೀಗಾಗಿ ಜಾತ್ರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಿದೆ. ಯಾವುದೇ ಸಮಸ್ಯೆ ಆಗದಂತೆ ಅಚ್ಚುಕಟ್ಟಾಗಿ ಉತ್ಸವ ನಡೆಯಬೇಕು. ಸುಗಮ ಜಾತ್ರೆಗೆ ಸೂಕ್ತ ಬಂದೋಬಸ್ತ್​ ಅಗತ್ಯವಿದೆ ಎಂದು ಹೇಳಿದರು.
ಡಿವೈಎಸ್​ಪಿ ಶಂಕರಗೌಡ ಪಾಟೀಲ್​ ಮಾತನಾಡಿ, ಈ ಭಾಗದ ಪ್ರಮುಖ ಜಾತ್ರೆ ಇದಾಗಿದ್ದು, ಅಸಂಖ್ಯ ಭಕ್ತರು ಪಾಲ್ಗೊಳ್ಳಲಿದ್ದಾರೆ. ಮುಖ್ಯವಾಗಿ ಟ್ರಾಫಿಕ್​ ಹಾಗೂ ಪಾರ್ಕಿಂಗ್​ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ದೇವಸ್ಥಾನಕ್ಕೆ ಬರುವ ರಸ್ತೆ ಅಕ್ಕ &ಪಕ್ಕದಲ್ಲಿ ಯಾವ ವಾಹನಗಳು ನಿಲ್ಲಿಸಬಾರದು. ಗುರುತಿಸಿರುವ ಸ್ಥಳದಲ್ಲೇ ಪಾರ್ಕಿಂಗ್​ ಮಾಡಬೇಕು ಎಂದು ತಿಳಿಸಿದರು.
ಅಳ್ಳೊಳ್ಳಿ ಮಾರ್ಗದಿಂದ ದೇವಸ್ಥಾನಕ್ಕೆ ಬರುವ ವಾಹನಗಳಿಗೆ ಬಲಭಾಗದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಹಾಗೂ ಯಾಗಾಪುರ ಭಾಗದಿಂದ ಬರುವ ವಾಹನಗಳಿ ಇನ್ನೊಂದ ಪಕ್ಕದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆ ಬಳಿಯ ಮೈದಾನದವರೆಗೆ ಬರಲು ಮಾತ್ರ ಬಸ್​ಗಳಿಗೆ ಅವಕಾಶ ಕಲ್ಪಿಸಲಾಗುವುದು. ದೇವರ ದರ್ಶನಕ್ಕಾಗಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸರದಿ ಸಾಲು ವ್ಯವಸ್ಥೆ ಮಾಡಲಾಗುವುದು. ಪ್ರದಣೆಗೆ ಅವಕಾಶವಿಲ್ಲ. ಯಾವುದೇ ಅಹಿತಕರ ಟನೆಗೆ ಅವಕಾಶ ನೀಡದೆ ಯಶಸ್ವಿಯಾಗಿ ಜಾತ್ರೆ ನಡೆಸೋಣ ಎಂದರು.
ಟ್ರಸ್ಟ್​ ಹಿರಿಯ ಸದಸ್ಯ ಭೀಮಣ್ಣ ಸಾಲಿ ಮಾತನಾಡಿ, ಜಾತ್ರೆಗೆ ವಿವಿಧ ಮಠಾಧೀಶರನ್ನು ಅಹ್ವಾನಿಸಿ ದೇವಸ್ಥಾನದ ಕಳಶಾರೋಹಣ ನೆರವೇರಿಸಲಾಗುವುದು. ಇಲ್ಲಿ ಹಿಂದಿನಿಂದಲೂ ಶಾಂತಿಯುತವಾಗಿ ಜಾತ್ರೆ ನಡೆಯುತ್ತಿದೆ. ಗಂವ್ಹಾರದ ಭಕ್ತರು ದಾಸೋಹದಲ್ಲಿ ಸೇವೆ ಸಲ್ಲಿಸುತ್ತಾರೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್​ ನಾಗಯ್ಯ ಹಿರೇಮಠ, ಸಿಪಿಐ ಎಸ್​.ಸಿ.ಪಾಟೀಲ್​, ಪಿಎಸ್​ಐ ಮಂಜುನಾಥರೆಡ್ಡಿ ಮಾತನಾಡಿದರು.
ದೇವಸ್ಥಾನ ಟ್ರಸ್ಟ್​ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಸದಸ್ಯರಾದ ರಾಜಶೇಖರಗೌಡ ಸಂಕನೂರ, ಮಹಾಂತಗೌಡ ಮಾಲಿಪಾಟೀಲ್​ ದಂಡಗುಂಡ ಇತರರಿದ್ದರು. ಮಹೇಶ ರುಮಾಲ ನಿರೂಪಣೆ ಮಾಡಿದರು.