ಎಲ್.ಎನ್. ಮುಕುಂದರಾಜ್  
ರಾಜ್ಯ

ದಲಿತ ಸಾಹಿತ್ಯ ಮತ್ತು ಚಳವಳಿ -50

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ಅಧ್ಯಯನ ಶಿಬಿರ ಆಯೋಜನೆ
  • * ಶಿಬಿರಕ್ಕೆ 60 ಮಂದಿ ಆಯ್ಕೆ
  • * ಎಲ್.ಎನ್. ಮುಕುಂದರಾಜ್ ಮಾಹಿತಿ
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜ.2ರಿಂದ 4ರವರೆಗೆ ‘ದಲಿತ ಸಾಹಿತ್ಯ ಮತ್ತು ಚಳವಳಿ 50’ ಶೀರ್ಷಿಕೆಯಡಿ ಅಧ್ಯಯನ ಶಿಬಿರ ಹಮ್ಮಿಕೊಂಡಿದೆ.
ಈ ಕುರಿತು ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ದಿನಗಳ ರಾಜ್ಯಮಟ್ಟದ ಈ ಅಧ್ಯಯನ ಶಿಬಿರವು ಜ್ಞಾನಭಾರತಿಯಲ್ಲಿ ಇರುವ ಬೆಂಗಳೂರು ವಿವಿಯ ವೆಂಕಟಗಿರಿಗೌಡ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯದಲ್ಲಿ ನಡೆದ ದಲಿತ ಚಳವಳಿಯ ಪರಿಣಾಮ ಮತ್ತು ಅದರ ಪ್ರಭಾವ ಹಾಗೂ ದಲಿತ ಸಾಹಿತ್ಯವನ್ನು ಸಾರಲಾಗುತ್ತದೆ ಎಂದು ಹೇಳಿದರು.
ಶುಕ್ರವಾರ ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕವಿ ಹಾಗೂ ದಲಿತ ಸಂಘರ್ಷ ಸಮಿತಿ ಹೋರಾಟಗಾರ ಎಚ್. ಗೋವಿಂದಯ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬೆಂಗಳೂರು ವಿವಿ ಕುಲಪತಿ ಜಯಕರ ಎಸ್.ಎಂ. ಅಧ್ಯಕ್ಷತೆ ವಹಿಸುವರು. ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಈ ಶಿಬಿರದ ನಿರ್ದೇಶಕರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ದಲಿತ ಚಳವಳಿ ಹುಟ್ಟು, ಬೂಸಾ ಚಳವಳಿ, ದಲಿತ ಆತ್ಮಕತೆಗಳು, ದಲಿತ ಕಾವ್ಯ, ದಲಿತ ಸಾಹಿತ್ಯ ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 14 ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ವಿಷಯ ತಜ್ಞರು ವಿಚಾರ ಮಂಡಿಸುತ್ತಾರೆ. ಶಿಬಿರದಲ್ಲಿ ಪಾಲ್ಗೊಳ್ಳಲು 250 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 60 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಅಕಾಡೆಮಿ ರಿಜಿಸ್ಟ್ರಾರ್ ಎನ್. ಕರಿಯಪ್ಪ, ಬೆಂಗಳೂರು ವಿವಿ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕ ಡಿ.ಡೊಮಿನಿಕ್ ಹಾಗೂ ಅಕಾಡೆಮಿ ಸದಸ್ಯರೂ ಆಗಿರುವ ಶಿಬಿರದ ಸಂಚಾಲಕ ರವಿಕುಮಾರ್ ಇತರರು ಇದ್ದರು.