Dalit family attacked for asking for directions
ಗುಬ್ಬಿ: ತೋಟಕ್ಕೆ ಹೋಗಲು ರಸ್ತೆ ಕೇಳಿದ್ದಕ್ಕೆ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವ ಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಬೆಣಚಿಗೆರೆಯಲ್ಲಿ ನಡೆದಿದೆ.
ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ದಲಿತ ಕುಟುಂಬದ ನಾಗರಾಜು ಹಲ್ಲೆ ಗೊಳಗಾಗಿದ್ದು, ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಣಚಿಗೆರೆ ಗ್ರಾಮದ ಲೋಕೇಶ್ ಮತ್ತು ಜ್ಯೋತಿ ಎಂಬುವವರು ಮಾ.29ರಂದು ತೋಟದ ಬಳಿ ರಸ್ತೆ ಬಿಟ್ಟು ಕಾಮಗಾರಿ ನಡೆಸುವಂತೆ ಮನವಿ ಮಾಡಿದಾಗ, ದಲಿತರಾದ ನಿಮಗೆ ರಸ್ತೆ ಬಿಡುವುದಿಲ್ಲ ಎಂದು ಕುಟುಂಬದವರೊಂದಿಗೆ ಸೇರಿಕೊಂಡು ಕಲ್ಲುಗಳಿಂದ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದ್ದಾರೆ. ಜತೆಗೆ ಮನೆಯಲ್ಲಿರುವ ಬಂದೂಕು ತಂದು ನಿಮ್ಮನ್ನು ಸುಟ್ಟು ಹಾಕುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗುಬ್ಬಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಶೇಖರ್ ಸೇರಿದಂತೆ ಗುಬ್ಬಿ ವೃತ್ತ ನಿರೀಕ್ಷಕ ರಾಘವೇಂದ್ರ ಭೇಟಿ ನೀಡಿ ಮಹಜರ್ ನಡೆಸಿದ್ದು, 4 ಜನರ ವಿರುದ್ಧ ಎಸ್ಸಿ&ಎಸ್ಟಿ ಪ್ರಕರಣದಡಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.