ಸೂರ್ಯನು ಉತ್ತರಾಯಣದಿಂದ ದಕ್ಷಿಣದ ಕಡೆಗೆ ತನ್ನ ಗೋಚರ ಚಲನೆಯನ್ನು ಆರಂಭಿಸುವ ಅವಧಿಯನ್ನು ದಕ್ಷಿಣಾಯಣ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಜುಲೈ ತಿಂಗಳ ಮಧ್ಯಭಾಗದಲ್ಲಿ ಆರಂಭವಾಗಿ ಜನವರಿ ಮಧ್ಯಭಾಗದವರೆಗೆ ಮುಂದುವರಿಯುತ್ತದೆ. ದಕ್ಷಿಣಾಯಣವು ಮಳೆಗಾಲದ ಆರಂಭದೊಂದಿಗೆ ಸಂಬಂಧ ಹೊಂದಿದ್ದು, ಪ್ರಕೃತಿಯ ಪುನರುಜ್ಜೀವನ ಮತ್ತು ಕೃಷಿ ಚಟುವಟಿಕೆಗಳಿಗೆ ಇದು ಪ್ರಮುಖ ಕಾಲವಾಗಿದೆ. ಕರ್ಕಾಟಕ ಸಂಕ್ರಾಂತಿಯಿಂದ ಆರಂಭವಾಗಿ ಮಕರ ಸಂಕ್ರಾಂತಿಯವರೆಗೆ ಇರುವ ಆರು ತಿಂಗಳ ಅವಧಿಯಾಗಿದೆ. ಉತ್ತರಾಯಣವು ಸಾಮಾನ್ಯವಾಗಿ ಮಕರ ಸಂಕ್ರಾಂತಿಯಿಂದ ಆರಂಭವಾಗಿ ಕರ್ಕಾಟಕ ಸಂಕ್ರಾಂತಿಯವರೆಗೆ ಇರುವ ಸುಮಾರು ಆರು ತಿಂಗಳ ಅವಧಿಯಾಗಿದೆ.
ಪುರಾಣಗಳ ಪ್ರಕಾರ ಮನುಷ್ಯರ ಒಂದು ವರ್ಷವು ದೇವತೆಗಳ ಒಂದು ದಿನವೆಂದು ಪರಿಗಣಿಸಲಾಗಿದೆ. ಉತ್ತರಾಯಣ ದೇವತೆಗಳಿಗೆ ಹಗಲಾದರೆ, ದಕ್ಷಿಣಾಯಣ ದೇವತೆಗಳಿಗೆ ರಾತ್ರಿ ಎಂದು ವಿವರಿಸುತ್ತವೆ. ದಕ್ಷಿಣಾಯಣ ಅವಧಿಯಲ್ಲಿ ದೇವತೆಗಳು ವಿಶ್ರಾಂತಿಯಲ್ಲಿರುತ್ತಾರೆ ಎಂಬ ನಂಬಿಕೆ ಇದೆ. ಆದರೂ ಭಕ್ತರು ಈ ಸಮಯದಲ್ಲಿ ಭಕ್ತಿ, ಪೂಜೆ, ದಾನ ಮತ್ತು ಧರ್ಮಕಾರ್ಯಗಳನ್ನು ಮಾಡಿದರೆ ಉತ್ತಮ ಫಲ ದೊರೆಯುತ್ತದೆ ಎಂದು ಶಾಸ್ತ್ರ›ಗಳು ತಿಳಿಸುತ್ತವೆ. ಉತ್ತರಾಯಣ ದೇವತೆಗಳಿಗೆ ಹಗಲಾದುದರಿಂದ ಹೊಸ ಕಾರ್ಯಗಳ ಆರಂಭ, ವಿವಾಹ, ಯಜ್ಞ, ದೇವಾಲಯ ನಿರ್ವಣ, ಉಪನಯನ ಮುಂತಾದ ಶುಭಕಾರ್ಯಗಳಿಗೆ ಇದು ಅತ್ಯಂತ ಮಂಗಳಕರ ಕಾಲವೆಂದು ನಂಬಲಾಗಿದೆ.
ದಕ್ಷಿಣಾಯಣವು ಆತ್ಮಾವಲೋಕನ, ಆತ್ಮಸಾಕ್ಷಾತ್ಕಾರ ಮತ್ತು ಆಧ್ಯಾತ್ಮಿಕ ಸಾಧನೆಗೆ ಸೂಕ್ತವಾದ ಸಮಯವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಧ್ಯಾನ, ಯೋಗ, ಜಪ, ತಪಸ್ಸು, ದಾನ, ಪಿತೃಕಾರ್ಯಗಳಿಗೆ ಪ್ರಸಕ್ತ ಕಾಲವೆಂದು ಪರಿಗಣಿಸಲಾಗಿದೆ. ಮತ್ತು ಧರ್ಮಗ್ರಂಥಗಳ ಅಧ್ಯಯನ ಮಾಡುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಏಕಾಗ್ರತೆ ದೊರೆಯುತ್ತದೆ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಗುರುಪೌರ್ಣಿಮೆ, ನಾಗರ ಪಂಚಮಿ, ವರಮಹಾಲಕ್ಷ್ಮೀ ವ್ರತ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಮತ್ತು ದೀಪಾವಳಿ ಮುಂತಾದ ಅನೇಕ ಪ್ರಮುಖ ಹಬ್ಬಗಳು ಈ ಅವಧಿಯಲ್ಲಿ ಆಚರಿಸಲ್ಪಡುತ್ತವೆ.
ಪ್ರಸಕ್ತ ದಕ್ಷಿಣಾಯಣ ಕಾಲವಾದುದರಿಂದ ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿವರೆಗೆ ಇರುವ ನಾಲ್ಕು ತಿಂಗಳ ಅವಧಿಯನ್ನು ವಿಶೇಷವಾಗಿ ಚಾತುರ್ವಸ ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಮಹಾವಿಷ್ಣು ಯೋಗನಿದ್ರೆಗೆ ಹೋಗುತ್ತಾರೆ ಎಂಬ ಪೌರಾಣಿಕ ನಂಬಿಕೆಯಿದೆ. ಈ ಸಮಯದಲ್ಲಿ ಯತಿಗಳು, ಸ್ವಾಮೀಜಿಗಳು ಒಂದು ಸ್ಥಳದಲ್ಲೇ ವಾಸ ಮಾಡಿ ಪ್ರವಚನಗಳನ್ನು ನಡೆಸುತ್ತಾರೆ. ಭಕ್ತರು ಉಪವಾಸ, ಪೂಜೆ, ಜಪ, ದಾನ ಹಾಗೂ ಸತ್ಸಂಗಗಳಲ್ಲಿ ತೊಡಗುತ್ತಾರೆ. ಅಲ್ಲದೆ ಚಾತುರ್ವಸದ ಅವಧಿಯಲ್ಲಿ ಅನೇಕ ಸನ್ಯಾಸಿಗಳು, ಯತಿಗಳು ಮತ್ತು ಸ್ವಾಮೀಜಿಗಳು ತಮ್ಮ ಮಠದ ಪರಂಪರೆ ಹಾಗೂ ಗುರುಗಳ ಆದೇಶದಂತೆ ಅತ್ಯಂತ ಸರಳ, ಸಾತ್ವಿಕ ಮತ್ತು ನಿಯಮಬದ್ಧ ಆಹಾರವನ್ನು ಸೇವಿಸುತ್ತಾರೆ. ವ್ರತಾಚರಣೆಯನ್ನು ಪಾಲಿಸುತ್ತಾರೆ. ಮಠ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ಕೆಲವು ಆಹಾರ ಪದಾರ್ಥಗಳನ್ನು ತಿಂಗಳುಗಳ ಕಾಲ ತ್ಯಜಿಸುತ್ತಾರೆ. ಉದಾಹರಣೆಗೆ, ಶ್ರಾವಣದಲ್ಲಿ ಸೊಪ್ಪು, ಭಾದ್ರಪದದಲ್ಲಿ ಮೊಸರು, ಆಶ್ವಯುಜದಲ್ಲಿ ಹಾಲು, ಕಾರ್ತಿಕದಲ್ಲಿ ಉದ್ದಿನ ಬೇಳೆ ಹೀಗೆ ಕೆಲವು ಆಹಾರ ರ್ವ್ಯಜವಾಗಿರುತ್ತದೆ, ಈ ನಿಯಮಗಳು ಎಲ್ಲ ಮಠಗಳಲ್ಲೂ ಒಂದೇ ರೀತಿಯಾಗಿರುವುದಿಲ್ಲ. ಪ್ರತಿಯೊಂದು ಪೀಠ ಅಥವಾ ಸಂಪ್ರದಾಯ ತನ್ನದೇ ಆದ ಆಚರಣೆಯನ್ನು ಅನುಸರಿಸುತ್ತದೆ. ಈ ಆಹಾರ ಪದ್ಧತಿ ಸ್ವಾಮೀಜಿಗಳ ಸಾಧನೆಯ ಒಂದು ಭಾಗವಾಗಿದೆ. ಮಿತಾಹಾರದಿಂದ ದೇಹ ಹಗುರವಾಗುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ, ಮನಸ್ಸು ಸ್ಥಿರವಾಗುತ್ತದೆ ಮತ್ತು ಜಪ, ಧ್ಯಾನ, ವೇದಾಧ್ಯಯನ ಹಾಗೂ ಪೂಜೆಗೆ ಅನುಕೂಲವಾಗುತ್ತದೆ ಎನ್ನುವುದು ತಾತ್ಪರ್ಯ.
ಇನ್ನು ಅನೇಕ ವೈಷ್ಣವ ಮಠಗಳಲ್ಲಿ ಆಷಾಢ ಶುಕ್ಲ ಏಕಾದಶಿ (ಶಯನೀ ಏಕಾದಶಿ), ಚಾತುರ್ವಸ್ಯದ ಆರಂಭ ವೈಷ್ಣವ ಸಂಪ್ರದಾಯದಲ್ಲಿ ಒಂದು ವಿಶೇಷ ಆಚರಣೆ ಇದೆ. ಅದು ತಪ್ತಮುದ್ರಾಧಾರಣೆ. ಅದೊಂದು ಪ್ರಮುಖ ಧಾರ್ವಿುಕ ಸಂಸ್ಕಾರ. ತಪ್ತ ಎಂದರೆ ಬಿಸಿ ಮಾಡಿದ, ಮುದ್ರೆ ಎಂದರೆ ಶಂಖ ಮತ್ತು ಚಕ್ರದ ಗುರುತು, ಧಾರಣೆ ಎಂದರೆ ಧರಿಸುವುದು ಎಂಬರ್ಥ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ದಕ್ಷಿಣಾಯನದ ಕಾಲದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಪುರಾಣ ವಾಚನ ಎಂಬ ಕಾರ್ಯಕ್ರಮ ದೇವಸ್ಥಾನದಲ್ಲಿ ಕರ್ಕಾಟಕ ಸಂಕ್ರಮಣದಿಂದ ಆರಂಭಗೊಳ್ಳುತ್ತದೆ. ಶ್ರೀ ಸ್ವಾಮಿಯ ಮುಂದೆ ತಾಡಪ್ರತಿ ಗ್ರಂಥವನ್ನಿಟ್ಟು, ಸರಸ್ವತೀ ಪೂಜೆಯನ್ನು ಮಾಡಿ ಮಹಾಪೂಜೆಯನ್ನು ನೆರವೇರಿಸುವಂತಹ ಸಂಪ್ರದಾಯವಿದೆ. ಸಂಕ್ರಮಣದ ಕೊನೆಗೂ ಕೂಡ ಇದೇ ರೀತಿ ಪೂಜೆ ನಡೆಸಲಾಗುತ್ತದೆ. ಸಂಕ್ರಮಣದ ಆರಂಭದಲ್ಲಿ ಸಂಕಲ್ಪ ಮಾಡಿ ಪೂಜೆ ನೆರವೇರಿಸಿದರೆ ಕೊನೆಯ ದಿನ ಬ್ರಹ್ಮಾರ್ಪಣೆ ಬಿಟ್ಟು ಪೂಜೆ ಮಾಡಲಾಗುತ್ತದೆ. ಸನ್ನಿಧಿಯಲ್ಲಿ ಈ ರೀತಿಯ ಪೂಜೆಯು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿತ್ತು. ಆಗ ಪುರಾಣದ ವಾಚನವಾಗಲಿ, ಪ್ರವಚನವಾಗಲಿ ನಡೆಯುತ್ತಿರಲಿಲ್ಲ. 1972ರಲ್ಲಿ ಸಂಪ್ರದಾಯಕ್ಕೆ ತುಸು ಬದಲಾವಣೆ ತಂದು ತಾಡಪ್ರತಿ ಗ್ರಂಥಗಳಿಗೆ ಪೂಜೆ ಸಲ್ಲಿಸುವುದರ ಜೊತೆಗೆ ದೇವಸ್ಥಾನದ ಎದುರುಗಡೆ ಇರುವ ಪ್ರವಚನ ಮಂಟಪದಲ್ಲಿ ಪುರಾಣ ವಾಚನ-ಪ್ರವಚನವನ್ನು ಆರಂಭಿಸಲಾಯಿತು. ಇದು ಶ್ರೀ ಸ್ವಾಮಿಯ ಮುಂದೆ ಸೇವಾರೂಪದಲ್ಲಿ ನಡೆಯುವಂಥ ಪುರಾಣ ವಾಚನ ಹಾಗೂ ಪ್ರವಚನ.
60 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಪುರಾಣವನ್ನು ವಾಚನ ಮತ್ತು ಪ್ರವಚನ ಮಾಡುವವರು ಬದಲಾಗುತ್ತಾರೆ. ಸಾಹಿತ್ಯಗಳೂ ಕೂಡ ಬದಲಾವಣೆಗಳಾಗುತ್ತವೆ. 60 ದಿನವೂ ಶ್ರೀ ಮಂಜುನಾಥ ಸ್ವಾಮಿಯು ಇದನ್ನು ಕೇಳುತ್ತಾರೆ. ಹಾಗಾಗಿ ಶ್ರೀ ಸ್ವಾಮಿಯ ಮುಂದೆ ನಡೆಯುವ ಸೇವೆ ಶ್ರೀ ಸ್ವಾಮಿಗೆ ಸಮರ್ಪಣೆಯಾಗುತ್ತದೆ. ಇದು ಭಕ್ತಾಧಿಗಳಿಗೆ ಹಾಗೂ ಧರ್ಮಸ್ಥಳದಲ್ಲಿರುವ ಜಿಜ್ಞಾಸುಗಳಿಗೆ ಪ್ರವಚನ-ವಾಚನವನ್ನು ಕೇಳಲು ಅನುಕೂಲವಾದ ಸುಸಂದರ್ಭವಾಗಿದೆ ಎಂಬುದು ನಮ್ಮ ಆಶಯ.
ಮಹಾಭಾರತದಲ್ಲಿಯೂ ದಕ್ಷಿಣಾಯಣದ ಕುರಿತು ಪರೋಕ್ಷವಾಗಿ ಮಹತ್ವದ ಉಲ್ಲೇಖವಿದೆ. ಮಹಾಯೋಧ ಭೀಷ್ಮರಿಗೆ ತಮ್ಮ ಮರಣಕಾಲವನ್ನು ತಾವೇ ಆಯ್ಕೆ ಮಾಡುವ ಇಚ್ಛಾಮರಣದ ವರವಿದ್ದ ಕಾರಣ, ಅವರು ಕುರುಕ್ಷೇತ್ರ ಯುದ್ಧದಲ್ಲಿ ಶರಶಯ್ಯೆಯ ಮೇಲೆ ಮಲಗಿ ಯುದ್ಧ ಮುಗಿದ ನಂತರವೂ ಅವರು ತಕ್ಷಣ ದೇಹತ್ಯಾಗ ಮಾಡಲಿಲ್ಲ. ದಕ್ಷಿಣಾಯನದಲ್ಲಿ ಮರಣ ಹೊಂದದೆ, ಉತ್ತರಾಯಣ ಆರಂಭವಾಗುವವರೆಗೆ ಶರಶಯ್ಯೆಯಲ್ಲಿಯೇ ಕಾಯುತ್ತಿದ್ದರು. ಆ ವೇಳೆ ಭೀಷ್ಮರು ಕೇವಲ ಮಲಗಿರಲಿಲ್ಲ; ಆ ಸಮಯವನ್ನು ಶ್ರೀಕೃಷ್ಣನ ಧ್ಯಾನ ಮತ್ತು ಸ್ಮರಣೆಯಲ್ಲಿ ಕಾಲ ಕಳೆದರು. ಆತ್ಮಚಿಂತನೆ ಮಾಡಿದರು. ಈ ಸಂದರ್ಭದಲ್ಲಿ ಯುಧಿಷ್ಟಿರ, ಮತ್ತಿತರ ಪಾಂಡವರು ಅನೇಕ ಋಷಿ ಮುನಿಗಳು ಧರ್ಮ, ರಾಜ್ಯನೀತಿ ಮತ್ತು ಜೀವನಮೌಲ್ಯಗಳ ಬಗ್ಗೆ ಭೀಷ್ಮರಿಂದ ಮಾರ್ಗದರ್ಶನ ಪಡೆದರು.
ಉತ್ತರಾಯಣ ಆರಂಭವಾದಾಗ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ಪ್ರಸಿದ್ಧ ನಂಬಿಕೆ ಇದೆ. ಆ ಅವಧಿಯಲ್ಲಿ ದೇಹತ್ಯಾಗ ಮಾಡಿದ ಪುಣ್ಯಾತ್ಮರಿಗೆ ಮೋಕ್ಷ ಅಥವಾ ಉನ್ನತ ಲೋಕಪ್ರಾಪ್ತಿ ಸುಲಭವಾಗುತ್ತದೆ ಎಂಬುದು ನಂಬಿಕೆ. ಮಕರ ಸಂಕ್ರಾಂತಿಯಂದು ಉತ್ತರಾಯಣ ಆರಂಭವಾದ ನಂತರ ಅವರು ಶ್ರೀ ಕೃಷ್ಣನ ದರ್ಶನ ಪಡೆದು ದೇಹ ತ್ಯಾಗ ಮಾಡಿದರು ಈ ಕಥೆಯು ಉತ್ತರಾಯಣದ ಮಹತ್ವವನ್ನು ಸಾರಿದರೂ, ದಕ್ಷಿಣಾಯಣವು ಭಕ್ತಿ, ತಪಸ್ಸು, ಧರ್ವಚರಣೆ ಮತ್ತು ಆತ್ಮಶುದ್ಧಿಗೆ ಅತ್ಯಂತ ಶ್ರೇಷ್ಠ ಕಾಲವೆಂದು ತಿಳಿಸುತ್ತದೆ.
ಇದಲ್ಲದೆ ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ನಮ್ಮ ಜೀವನಕ್ಕೆ ಜ್ಞಾನದ ಬೆಳಕನ್ನು ನೀಡಿದ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳಿಗೆ ಕೃತಜ್ಞತೆ ಹಾಗೂ ಗೌರವವನ್ನು ಸಲ್ಲಿಸುವ ಪವಿತ್ರವಾದ ಸಂದರ್ಭವಾಗಿದ್ದು, ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ಭಾರತ, ನೇಪಾಳ ಮತ್ತು ಭೂತಾನ್ ದೇಶಗಳಲ್ಲಿ ಶ್ರದ್ಧಾಭಕ್ತಿಯಿಂದ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ.
ರೈತರಿಗೂ ಕೂಡ ದಕ್ಷಿಣಾಯಣವು ಅತ್ಯಂತ ಪ್ರಮುಖ ಕಾಲವಾಗಿದೆ. ಮಳೆಗಾಲದ ಆರಂಭದಿಂದ ಭತ್ತ, ರಾಗಿ, ಜೋಳ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳ ಬಿತ್ತನೆ ನಡೆಯುತ್ತದೆ. ಉತ್ತಮ ಮಳೆಯು ಉತ್ತಮ ಬೆಳೆ ಮತ್ತು ಆಹಾರ ಭದ್ರತೆಗೆ ಕಾರಣವಾಗುತ್ತದೆ. ದಕ್ಷಿಣಾಯನದ ಅವಧಿಯು ಪ್ರಕೃತಿಯನ್ನು ಸಂರಕ್ಷಿಸುವುದು, ನೀರನ್ನು ಉಳಿಸುವುದು, ಮರಗಳನ್ನು ಬೆಳೆಸುವುದು ಮತ್ತು ಪರಿಸರವನ್ನು ಕಾಪಾಡುವ ಅಗತ್ಯವನ್ನು ನಮಗೆ ನೆನಪಿಸುತ್ತದೆ. ಒಟ್ಟಿನಲ್ಲಿ ಪೂರ್ವಜರು, ಹಿರಿಯರು ಹಾಕಿಕೊಟ್ಟ ಸಂಪ್ರದಾಯ, ಆಚರಣೆಗಳೆಲ್ಲ ನಮ್ಮ ಬದುಕನ್ನು ಮತ್ತಷ್ಟು ಹಸನಾಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)