Dairy farming is the lifeline for farmers during times of drought.
ಬರಗಾಲದ ಸಂಕಷ್ಟದ ಸಂದರ್ಭದಲ್ಲಿ ರೈತರ ಜೀವನಾಡಿಯಾಗಿ ಹೈನುಗಾರಿಕೆ ಕಾರ್ಯ ನಿರ್ವಹಿಸುತ್ತಿದ್ದು, ಈ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಎಲ್ಲ ರೈತರು ಸಹಕರಿಸಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕರೆ ನೀಡಿದರು.
ಕೋಮುಲ್ ಹಾಲು ಒಕ್ಕೂಟದ ಶಿಬಿರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮರಣ ಹೊಂದಿದ ಜಾನುವಾರುಗಳ ಮಾಲೀಕರಿಗೆ 28 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ, ಕೋಮುಲ್ ಟ್ರಸ್ಟ್ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ರೈತರಿಗೆ ಹಸಿರು ಮೇವು ಬೆಳೆಯಲು ಮೇವಿನ ಬೀಜ ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದ್ದರೂ ರೈತರು ಆತಂಕಪಡುವ ಅಗತ್ಯವಿಲ್ಲ. ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ರೈತರ ಹಿತಾಸಕ್ತಿಗೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಯಾವುದೇ ಸಂಕಷ್ಟದಲ್ಲಿಯೂ ರೈತರಿಗೆ ಆಸರೆಯಾಗುವುದು ಹೈನುಗಾರಿಕೆಯಾಗಿದ್ದು, ಪ್ರತಿಯೊಬ್ಬ ರೈತರೂ ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.
ಹೈನುಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೂ ಉತ್ತೇಜನ ನೀಡುವ ಉದ್ದೇಶದಿಂದ ಕೋಮುಲ್ನಿಂದ 20 ವಿದ್ಯಾರ್ಥಿಗಳಿಗೆ ಒಟ್ಟು <2 ಲಕ್ಷ ಪ್ರೋತ್ಸಾಹಧನ ವಿತರಿಸಲಾಗಿದೆ ಎಂದರು.
ಕಳೆದ 13 ವರ್ಷದಿಂದ ಶಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಲಾಗಿದೆ. ಪ್ರಸ್ತುತ ಬರ ಪರಿಸ್ಥಿತಿ ಇದ್ದರೂ ತಾಲೂಕು ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ನೇರವಾಗಿ ಸಂಪರ್ಕಿಸಿದರೆ ತಕ್ಷಣ ಸ್ಪಂದಿಸಲಾಗುವುದು ಎಂದರು.
ಸಮಸ್ಯೆಗಳಿಗೆ ಪ್ರತಿಭಟನೆ ಪರಿಹಾರವಲ್ಲ. ಕೆಲವರು ಗ್ರಾಮಸ್ಥರನ್ನು ದಿಕ್ಕುತಪ್ಪಿಸಿ ಧರಣಿಗೆ ಪ್ರಚೋದಿಸಬಹುದು. ಅಂತಹವರಿಗೆ ಅವಕಾಶ ನೀಡದೆ ಸಮಸ್ಯೆಗಳನ್ನು ನೇರವಾಗಿ ನಮ್ಮ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ರೈತರ ಆರ್ಥಿಕ ಸಬಲೀಕರಣಕ್ಕಾಗಿ ಹಾಲು ಒಕ್ಕೂಟವು ವಿವಿಧ ಯೋಜನೆ ಜಾರಿಗೊಳಿಸಿದ್ದು, ಎಮ್ಮೆ ಖರೀದಿಗೆ 30 ಸಾವಿರ ಸಹಾಯಧನ ನೀಡಲಾಗುತ್ತಿದೆ. ರೈತರು ಈ ಸೌಲಭ್ಯ ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.