ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೈಲೇಜ್ ಯಂತ್ರವನ್ನು ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಿದರು. ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಎಸ್.ಪಿ. ಮುನಿರಾಜು, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಬಿ. ರಾಜಣ್ಣ, ಬಯಪ ಅಧ್ಯಕ್ಷ ವಿ. ಶಾಂತಕುಮಾರ್, ನಿರ್ದೇಶಕ ಸಿ ಪ್ರಸನ್ನ ಕುಮಾರ್ ಇದ್ದರು.
ದೇವನಹಳ್ಳಿ : ರೇಷ್ಮೆ ಮತ್ತು ಹೈನುಗಾರಿಕೆ ರೈತರಿಗೆ ಎರಡು ಕಣ್ಣುಗಳಿದ್ದಂತೆ. ಹೈನುಗಾರಿಕೆ ಆರ್ಥಿಕ ಶಕ್ತಿ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ ಹಾಲು ಶಿಬಿರ ಕಚೇರಿ ಆವರಣದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಸೈಲೇಜ್ ಯಂತ್ರ ಉದ್ಘಾಟನೆ ಹಾಗೂ ಟ್ರಾ$್ಯಕ್ಟರ್ ಮತ್ತು ಹಸು ಮ್ಯಾಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೊಸ ತಂತ್ರಜ್ಞಾನ ಬಳಸಿಕೊಂಡು ರೈತರು ಹೈನುಗಾರಿಕೆ ಮಾಡಿಕೊಂಡು ಹೋಗಬೇಕು. ಹಸಿ ಮೇವನ್ನು ಹೆಚ್ಚು ಹಾಕುವುದರಿಂದ ಹಾಲು ಉತ್ಪಾದನೆ ಹೆಚ್ಚಿಸಲು ಸಹಕಾರಿಯಾಗಲಿದೆ. ಸೈಲೇಜ್ ಯಂತ್ರ ಮೂಲಕ ಹಸಿ ಜೋಳದ ಮೇವು ಸಂಗ್ರಹಿಸಿ ಸೈಲೇಜ್ ಮೂಲಕ ಶೇಖರಿಸಿ ಒಂದು ವರ್ಷ ಆ ಬ್ಯಾಗಿನಲ್ಲಿ ಇಡುವುದರಿಂದ ಹಸುಗಳಿಗೆ ಹೆಚ್ಚು ಉಪಯುಕ್ತವಾಗಿ ಹೆಚ್ಚು ಅನುಕೂಲವಾಗಲಿದೆ ಎಂದರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಎಸ್.ಪಿ. ಮುನಿರಾಜು ಮಾತನಾಡಿ, ಜೋಳದ ಹಸಿ ಮೇವು ಸಂಗ್ರಹಿಸಿ ಸೈಲೇಜ್ ಬ್ಯಾಗಿನಲ್ಲಿಟ್ಟು ಒಂದು ವರ್ಷ ಹಾಲು ಉತ್ಪಾದಕ ರೈತರು ಬಳಸಬಹುದು. ಸೈಲೇಜ್ ಯಂತ್ರದಲ್ಲಿ ಖಾಸಗಿ ಅವರು ಒಂದು ಕೆಜಿಗೆ 10 ರೂಪಾಯಿ ತೆಗೆದುಕೊಳ್ಳುತ್ತಾರೆ. ಆದರೆ, ನಾವು ರೈತರು ಜೋಳದ ಕಡ್ಡಿಗಳನ್ನು ತೆಗೆದುಕೊಂಡು ಬಂದರೆ ಕಾರ್ಮಿಕರ ಕೂಲಿ ವೆಚ್ಚ, ಡೀಸೆಲ್ ಖರ್ಚು, ಸೈಲೇಜ್ 50 ರಿಂದ 60 ಕೆಜಿ ಬ್ಯಾಗ್ ದರ ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ಮಂಜುನಾಥ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಎಸ್.ಸಿ. ವಿಭಾಗದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ದೇವನಹಳ್ಳಿ ಶಿಬಿರ ಕಚೇರಿಯ ಮುಖ್ಯಸ್ಥ ಮುನಿರಾಜು, ದೇವನಹಳ್ಳಿ ಶಿಬಿರ ಕಚೇರಿಯ ಪಶು ಮುಖ್ಯಸ್ಥ ಡಾ. ಭರತ್, ಡಾ. ಮಹದೇವ್, ದೇವನಹಳ್ಳಿ ಶಿಬಿರ ಕಚೇರಿಯ ಸಿಬ್ಬಂದಿ ಇದ್ದರು.