Dairy farming contributes to economic empowerment
ಶಿರಾ: ದುಡಿಯ ಬೇಕೆಂಬ ಹಂಬಲ ಅಚಲ ವಿಶ್ವಾಸ, ಆರ್ಥಿಕವಾಗಿ ಸಬಲರಾಗಬೇಕೆಂಬ ಸಂಕಲ್ಪ ಪ್ರತಿಯೊಬ್ಬ ಮಹಿಳೆಯರಲ್ಲಿ ಇದ್ದರೆ ಹೈನುಗಾರಿಕೆ ಕ್ಷೇತ್ರ ಯಶಸ್ಸು ನೀಡಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.
ತಾಲೂಕಿನ ಗೌಡಗೆರೆ ಹೋಬಳಿಯ ಹೊನ್ನೇನಹಳ್ಳಿ ಡೇರಿಯಲ್ಲಿ ಬುಧವಾರ ಕ್ಷೀರ ಸಂಜೀವಿನಿ ಹಂತ 5ರ ಯೋಜನೆಯಡಿ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾಲು ಅಮೃತವಿದ್ದಂತೆ ಹಾಲಿನ ಉತ್ಪನ್ನಗಳು ಮನುಷ್ಯನ ಆರೋಗ್ಯವನ್ನು ಸ್ಥಿರವಾಗಿಡುವಲ್ಲಿ ಸಹಕಾರಿಯಾಗುತ್ತವೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಹೊನ್ನೇನಹಳ್ಳಿ ಡೇರಿಯ 14 ಮಹಿಳೆಯರಿಗೆ ಹಸು ಖರೀದಿ ಮಾಡಲು ತಲಾ 46 ಸಾವಿರದಂತೆ 6.5 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಿದ್ದೇವೆ, ಇದರ ಸದುಪಯೋಗವನ್ನು ಮಹಿಳೆಯರು ಪಡೆದು ಕೊಂಡು ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸುವತ್ತ ಮುನ್ನಡೆಯಬೇಕು ಎಂದರು.
ಡೇರಿಗಳು ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾದರೆ, ತುಮಕೂರು ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ಸಿಗಲಿದೆ. ಶಿರಾ ತಾಲೂಕಿನಲ್ಲಿ ಪ್ರತಿನಿತ್ಯ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಬೇಕೆಂಬ ನಮ್ಮ ಸಂಕಲ್ಪಕ್ಕೆ ಉತ್ಪಾದಕರು ಸಹಕರಿಸಿ ಗುರಿ ಮುಟ್ಟಲು ಕೈಜೋಡಿಸಬೇಕು ಎಂದರು. ವಿಸ್ತರಣಾಧಿಕಾರಿ ಚೈತ್ರಾ, ಸ್ಟೇಪ್ ಮುಖ್ಯಸ್ಥೆ ಮಧು, ಪಶುವೈದ್ಯ ಶ್ರೀಕಾಂತ್, ಡಾ.ಇಟ್ಲಾಸ್, ಸಮಾಲೋಚಕರಾದ ಬಾಬಾ ಫಕ್ರುದ್ದೀನ್ ಪಿ.ಎಂ., ಪ್ರವಿಣ್, ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷ ಕೆ.ರಾಧಾ, ಮುಖಂಡ ಮುದ್ದು ಗಣೇಶ್, ಆರೋಗ್ಯ ಇಲಾಖೆಯ ಚಂದ್ರಪ್ಪ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಸವಿತಾ ವಿಠಲ್ ಮತ್ತಿತರರು ಇದ್ದರು.