cyclone  
ರಾಜ್ಯ

ದಿತ್ವಾಹ್​​ ಸೈಕ್ಲೋನ್ ರಾಜ್ಯದಲ್ಲಿ ಮಳೆ-cyclone

ಪ್ರಮುಖ ಮುಖ್ಯಾಂಶಗಳು

  • ದಿತ್ವಾಹ್​​ ಸೈಕ್ಲೋನ್ ಪರಿಣಾಮ ರಾಜ್ಯದಲ್ಲಿ ಮಳೆ
  • ನ.30ಕ್ಕೆ ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿ ಜೋರು
  • ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು: ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ  ದಿತ್ವಾಹ್​​  ಸೈಕ್ಲೋನ್ ರೂಪುಗೊಂಡಿದೆ. ಇದರ ಪರಿಣಾಮ ದಕ್ಷಿಣ ಕರ್ನಾಟಕ ಸೇರಿ ಇತರ ಭಾಗಗಳಲ್ಲಿ ನ.30ರಿಂದ ಮುಂದಿನ 3 ದಿನ ಜೋರು ಮಳೆಯಾಗುವ ಸಾಧ್ಯತೆ ಇದೆ. 
ಪುದುಚೇರಿನಿಂದ 640 ಕಿಮೀ, ಚೆನ್ನೈನಿಂದ 730 ಕಿಮೀ ದೂರದಲ್ಲಿರುವ ಸೈಕ್ಲೋನ್, ಬಂಗಾಳಕೊಲ್ಲಿಯ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸಲಿದೆ. ಉತ್ತರ ತಮಿಳುನಾಡು, ಪುದುಚೇರಿ, ಕೇರಳ, ದಕ್ಷಿಣ ಆಂಧ್ರಪ್ರದೇಶ ಮತ್ತು ರಾಯಲಸೀಮಾದಲ್ಲಿ ಮುಂದಿನ ನಾಲ್ಕೈದು ದಿನ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ಕೊಟ್ಟಿದೆ. 
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಚಾಮರಾಜನಗರದಲ್ಲಿ ನ.30ರಂದು ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಮುಂದಿನ 4 ದಿನ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ. ಡಿ.30ಕ್ಕೆ ಈಶಾನ್ಯ ಮಾರುತ ಕೊನೆಗೊಳ್ಳಲಿದೆ. 
ತಾಪಮಾನ ತುಸು ಕುಸಿತ:
ಮೋಡ ಕವಿದ ವಾತಾವರಣದಿಂದ ವಿಜಯಪುರ, ರಾಯಚೂರು, ಗದಗ, ಧಾರವಾಡ, ಬೀದರ್, ಬೆಂಗಳೂರು, ಗಂಗಾವತಿ, ಮಂಡ್ಯ ಸೇರಿ ರಾಜ್ಯದ ಹಲವು ಜಿಲ್ಲೆಗಳ ಕನಿಷ್ಠ ತಾಪಮಾನದಲ್ಲಿ ಸರಾಸರಿ 1-2 ಡಿ.ಸೆ.ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ,ಹಗಲಿನ ವೇಳೆ ಥಂಡಿ ವಾತಾವರಣ ಅನುಭವವಾಗುತ್ತಿದೆ. ಕೆಲ ಪ್ರದೇಶಗಳಲ್ಲಿ ಬೆಳಗ್ಗಿನ ಜಾವದಲ್ಲಿ ಮಂಜು ಬೀಳುತ್ತಿದೆ.