ರಾಮಚಂದ್ರಯ್ಯ 
ರಾಜ್ಯ

ಬೈಕ್ ಡಿಕ್ಕಿ ಹೊಡೆದು ಸೈಕಲ್ ಸವಾರ ಸಾವು

ಹಲಗೂರು: ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದ ಬಳಿ ಸೈಕಲ್‌ನಲ್ಲಿ ಹೋಗುತ್ತಿದ್ದ ಸವಾರನಿಗೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡ ಸವಾರ ಆಸ್ಪತ್ರೆಗೆ ತೆರಳುವ ವೇಳೆ ಮೃತಪಟ್ಟಿದ್ದಾರೆ.

ಮೂಲತಃ ದೊಡ್ಡೆಲಚಗೆರೆ ಗ್ರಾಮದ ನಿವಾಸಿ ರಾಮಚಂದ್ರಯ್ಯ (72) ಮೃತರು. ಭಾನುವಾರ ಸಾಯಂಕಾಲ ಕಾರ್ಯ ನಿಮಿತ್ತ ರಾಮಚಂದ್ರಯ್ಯ ಸೈಕಲ್‌ನಲ್ಲಿ ದೊಡ್ಡೆಲಚಗೆರೆ ಗ್ರಾಮದಿಂದ ದಳವಾಯಿ ಕೋಡಿಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ಬೆಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ಹಿಂಬದಿಯಿಂದ ಬಂದು ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ತೀವವಾಗಿ ಗಾಯಗೊಂಡ ರಾಮಚಂದ್ರಯ್ಯ ಅವರನ್ನು ತಕ್ಷಣ ಮಳವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಸೋಮವಾರ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸುದಾರರಿಗೆ ನೀಡಲಾಯಿತು. ಹಲಗೂರು ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಧರ್ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.