ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಸೈಕ್ಲಿಂಗ್ ಜಾಥಾದಲ್ಲಿ ಭಾಗವಹಿಸಿದ್ದ ಸೈಕ್ಲಿಸ್ಟ್‌ಗಳು.  
ರಾಜ್ಯ

ಸೈಕಲ್ ಸಂಚಾರ ಸದೃಢ ಆರೋಗ್ಯಕ್ಕೆ ಪೂರಕ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ರಾಜು ಬಿರಾದಾರ ಅಭಿಮತ
  • ಸೈಕ್ಲಿಂಗ್ ಜಾಥಾಕ್ಕೆ ಚಾಲನೆ
ವಿಜಯಪುರ: ಸದೃಢ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ನಿತ್ಯ ಸೈಕಲ್ ಓಡಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ರಾಜ್ಯ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ ಹೇಳಿದರು.
ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಹಾಗೂ ವಿಶಾಲ್ ಸೈಕಲ್ ಮಹಾಲ್ ಸಹಯೋಗದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೈಕ್ಲಿಂಗ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
1868ರಲ್ಲಿ ಸೈಕ್ಲಿಂಗ್ ಕ್ರೀಡೆಯಾಗಿ ಪರಿವರ್ತನೆಯಾಗಿ ಭಾರತದೇಶಕ್ಕೆ 1938ರಲ್ಲಿ ಪಾದಾರ್ಪಣೆಯಾಯಿತು. ಬಳಿಕ 70ರ ದಶಕದಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸೈಕ್ಲಿಂಗ್ ಕ್ರೀಡೆಗೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿತು. ಅದರಿಂದಾಗಿ ಅವಿಭಜಿತ ವಿಜಯಪುರ ಜಿಲ್ಲೆಯ ಸೈಕ್ಲಿಸ್ಟ್‌ಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಾರೆ ಎಂದು ತಿಳಿಸಿದರು.
ಈ ಕ್ರೀಡೆ ಕೇವಲ ಸೈಕ್ಲಿಸ್ಟ್‌ಗಳಿಗೆ ಮಾತ್ರವಲ್ಲ. ಜನಸಾಮಾನ್ಯರು ಸೈಕಲ್ ನಿತ್ಯ ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದಾಗಿದೆ. ನಿತ್ಯ ಸೈಕಲ್ ಸಂಚಾರದಿಂದಾಗಿ ಬಿಪಿ ಮತ್ತು ಸಕ್ಕರೆ ಕಾಯಿಲೆಗಳಿಂದ ದೂರವಿದ್ದು, ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದೆ ಎಂದು ಅವರು ತಿಳಿಸಿದರು.
ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಮಾತನಾಡಿ, ಇತರೇ ಕ್ರೀಡೆಗಳಿಗಿಂತ ಇಂದಿನ ದಿನಗಳಲ್ಲಿ ಸೈಕ್ಲಿಂಗ್ ಕ್ರೀಡೆ ಸಾಕಷ್ಟು ಮಹತ್ವ ಪಡೆದಿದ್ದು, ಸದೃಢ ಆರೋಗ್ಯ ಜೀವನ ನಿರ್ವಹಣೆಗೆ ಈ ಕ್ರೀಡೆ ಅತ್ಯುಪಯುಕ್ತ ಎಂದರು.
ನಂತರ ಆರಂಭಗೊಂಡ ಜಾಥಾವು ಗೋಲಗುಂಬಜ್, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಗಾಂಧಿ ವೃತ್ತ, ಶಿವಾಜಿ ವೃತ್ತ, ಇಬ್ರಾಹಿಂ ರೋಜಾ, ವಾಟರ್‌ಟ್ಯಾಂಕ್ ಮಾರ್ಗವಾಗಿ ಬಿಎಲ್‌ಡಿಇ ಕ್ಯಾಂಪಸ್ ತಲುಪಿತು. ಬಳಿಕ ಅಲ್ಲಿಂದ ನಗರದ ಸಿದ್ಧೇಶ್ವರ ದೇವಸ್ಥಾನದ ಮೂಲಕ ಸಾಗಿ ಮರಳಿ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿತು.
ಆರ್‌ಕೆಎಂ ಕಾಲೇಜಿನ ವಿದ್ಯಾರ್ಥಿಗಳು, ಸೈಕ್ಲಿಂಗ್ ಕ್ರೀಡಾ ವಸತಿ ಶಾಲೆ, ವಿಸಿಜಿ ಗ್ರುಪ್, ರೈಲ್ವೆ, ಪೊಲೀಸ್ ಇಲಾಖೆ ಕ್ರೀಡಾಪಟುಗಳು, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಯದರ್ಶಿ ಸೋಮಶೇಖರ ಸ್ವಾಮಿ, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್ ಪದಾಧಿಕಾರಿ ಗಂಗಾಧರ ಪತ್ತಾರ, ಸಂಜೀವ ಪಡತರೆ, ಸಂತೋಷ ಕುಮಾರ ಕತಕನಹಳ್ಳಿ, ಶ್ರೀಕಾಂತ ಮಠ, ಸೋಮಶೇಖರ ಮಠದ, ಲಕ್ಷ್ಮಣ ತೇರದಾಳ, ನಿಜಪ್ಪ ಎಂಟೆತ್ತು, ತರಬೇತುದಾರರಾದ ಅಲ್ಕಾ ಪಡತರೆ, ರಮೇಶ ರಾಠೋಡ, ಪೊಲೀಸ್ ತಂಡದ ಆಸೀಫ್ ಅತ್ತಾರ ಮತ್ತಿತರರಿದ್ದರು.