ಆಶಾಢ ಏಕಾದಶಿ ಅಂಗವಾಗಿ ಸುಕ್ಷೇತ್ರ ಪಂಢರಪುರದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ವಾರಿ ಭಾಗವಹಿಸಿದ್ದ ವಿಜಯಪುರದ ವಿಸಿಜಿ ಗ್ರೂಪ್ ಸದಸ್ಯರು. ಶಿವನಗೌಡ ಪಾಟೀಲ, ರವಿ ಚೌಧರಿ, ಮಹಾಂತೇಶ ಜಾಲಗೇರಿ ಮತ್ತಿತರರಿದ್ದಾರೆ. 
ರಾಜ್ಯ

ಪಂಢರಪುರ ಕ್ಷೇತ್ರದಲ್ಲಿ ಸೈಕಲ್ ವಾರಿ

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ಎಂಟು ಸಾವಿರ ಸೈಕ್ಲಿಸ್ಟ್‌ಗಳು ಭಾಗಿ
  • ವಿಜಯಪುರದಿಂದ 40 ಸದಸ್ಯರಿಂದ ಯಾತ್ರೆ
ವಿಜಯಪುರ : ಆಷಾಡ ಏಕಾದಶಿ ನಿಮಿತ್ತ ದೇಶದ ವಿವಿಧ ಭಾಗಗಳಿಂದ ಸೈಕಲ್ ಮೂಲಕ ಪಂಢರಪುರ ಕ್ಷೇತ್ರಕ್ಕೆ ಆಗಮಿಸುವ ಸೈಕಲ್ ವಾರಿ ಕಾರ್ಯಕ್ರಮ ವಿಶಿಷ್ಟಪೂರ್ಣವಾಗಿ ನಡೆಯಿತು.
ಪಂಢರಪುರ ವಿಠೋಬಾ ದರ್ಶನಕ್ಕೆ ಪ್ರತಿವರ್ಷವೂ ಕಾಲುನಡಿಗೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವುದು ಸಂಪ್ರದಾಯ. ಆದರೆ, ಕಳೆದ 2-3 ವರ್ಷಗಳಿಂದ ಕೆಲವು ಉತ್ಸಾಹಿ ಸೈಕ್ಲಿಂಗ್ ಸಂಘಟಕರು ಸೇರಿ ಆರಂಭಿಸಿದ ಸೈಕಲ್ ವಾರಿ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡ ಸೈಕ್ಲಿಂಗ್ ಗ್ರೂಪ್ ಸದಸ್ಯರು ತಮ್ಮ ತಮ್ಮ ಸ್ಥಳಗಳಿಂದ ಸೈಕಲ್ ಸವಾರಿ ಮಾಡುತ್ತಾ ಪಂಢರಪುರಕ್ಕೆ ಆಗಮಿಸುವರು. ಅಲ್ಲಿ ಹಿಂದಿನ ರಾತ್ರಿಯೆ ಸೈಕ್ಲಿಂಗ್ ಸಮ್ಮೇಳನ ನಡೆಯುವುದು.
ಈ ಸಮ್ಮೇಳನದಲ್ಲಿ ವಿವಿಧ ಸೈಕ್ಲಿಸ್ಟ್ಗಳು ವಿಚಾರ ಸಂಕಿರಣಗಳಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವರು. ಮಾರನೆಯ ದಿನ ಬೆಳಗ್ಗೆ ಎಲ್ಲ ಸೈಕ್ಲಿಸ್ಟ್ಗಳು ತಮ್ಮ ಸೈಕಲ್ ಸವಾರಿ ಮೂಲಕ ನಗರ ಪ್ರದಕ್ಷಿಣೆ ಮಾಡಿ ನಂತರ ಸ್ಥಳೀಯ ಕ್ರೀಡಾಂಗಣದಲ್ಲಿ ಸಮಾವೇಶಗೊಂಡು ಸೈಕಲ್ ರಿಂಗನ್‌ನಲ್ಲಿ ಭಾಗವಹಿಸುವರು.
ಜು. 11 ಮತ್ತು 12ರಂದು ನಡೆದ ಈ ಸೈಕಲ್ ವಾರಿಯಲ್ಲಿ ದೇಶದಾದ್ಯಂತ ಆಗಮಿಸಿದ 8 ಸಾವಿರ ಸೈಕ್ಲಿಸ್ಟ್ಗಳು ಭಾಗವಹಿಸಿದ್ದರು. ವಿಜಯಪುರ ಸೈಕ್ಲಿಂಗ್ ಗ್ರೂಪ್‌ನ 40 ಸದಸ್ಯರು ವಿಜಯಪುದಿಂದ ಪಂಢರಪುರದವರೆಗೆ 100 ಕಿಮೀ. ಸೈಕಲ್ ಯಾತ್ರೆಯಲ್ಲಿ ಭಾಗವಹಿಸಿದ್ದರು.
ವಿಜಯಪುರ ನಗರದ ಬಿ.ಎಂ. ಪಾಟೀಲ ವೃತ್ತದಿಂದ ಆರಂಭಗೊಂಡ ಸೈಕಲ್ ವಾರಿಗೆ ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ ಚಾಲನೆ ನೀಡಿದ್ದರು.
ವಿಸಿಜಿ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ವಿಸಿಜಿಯ ಕ್ಯಾಲೆಂಡರ್‌ನಲ್ಲಿ ಪಂಢರಪುರ ಸೈಕಲ್ ವಾರಿಯನ್ನು ಸೇರಿಸಲಾಗಿದ್ದು, ಪ್ರತಿ ವರ್ಷವೂ ಈ ಯಾತ್ರೆಯಲ್ಲಿ ಪ್ರತಿಯೊಬ್ಬ ಸೈಕ್ಲಿಸ್ಟ್ ಪಾಲ್ಗೊಳ್ಳಬೇಕು. ಬಸವ ಜಯಂತಿ 42 ಕಿಮೀ. ರನ್ ಮತ್ತು ಡಿಸೆಂಬರ್ ಎರಡನೆಯ ಭಾನುವಾರ ನಡೆಯುವ ವೃಕ್ಷೋಥಾನ್ ವಿಸಿಜಿ ಪ್ರಮುಖ ಕಾರ್ಯಕ್ರಮಗಳಾಗಿವೆ ಎಂದರು.
ಕೋಟಿ ವೃಕ್ಷ ಅಭಿಯಾನ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ, ವಿಠಲ ತೇಲಿ, ರಾಜಶೇಖರ ಸಜ್ಜನ, ಪ್ರಕಾಶ
ಕನ್ನೂರ, ಶಾಂತಪ್ಪ ದೇಸಾಯಿ ಉಪಸ್ಥಿತರಿದ್ದರು.
ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ ನೇತೃತ್ವದಲ್ಲಿ ನಡೆದ ಸೈಕಲ್ ವಾರಿಯಲ್ಲಿ ರವಿ ಚೌಧರಿ, ಮಹಾಂತೇಶ ಜಾಲಗೇರಿ, ರಾಜು ಯಲಗೊಂಡ, ರವಿ ಸಂಖ, ಸೋಮಶೇಖರ ಸ್ವಾಮಿ, ವೀರೇಂದ್ರ ಗುಚ್ಚಟ್ಟಿ, ಅನೀಲ ಧಾರವಾಡಕರ, ಸಿದ್ದು ನಾಯ್ಕೋಡಿ, ಚಂದ್ರಹಾಸ ಬಣ್ಣದ, ಸಂತೋಷ ಸಜ್ಜನ, ಮಹೇಶ ಆಲಮೇಲ, ಮುರುಗೇಶ ಅಲಬಾಳ, ಅಂಬರೀಶ ಭೈರಗೊಂಡ ಮತ್ತಿತರರಿದ್ದರು.