ಹುಣಸೂರಿನ ಬಾಲಕಿಯರ ಫ್ರೌಢಶಾಲೆಯಲ್ಲಿ ಶ್ರೀಗಂಧ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಬಿಇಒ ಮಹದೇವ್ ಉದ್ಘಾಟಿಸಿದರು. ರೇಖಾ ಶಶಿಧರ್, ಬಿಇಒ ಮಹದೇವ್ ಇತರರು ಇದ್ದರು. 
ರಾಜ್ಯ

ಮಾನಸಿಕ ಬೆಳವಣಿಗೆಗೆ ಸಾಂಸ್ಕೃತಿಕ ಚಟುವಟಿಕೆ ಸಹಕಾರಿ

ಹುಣಸೂರು: ಹೆಣ್ಣು ಮಕ್ಕಳು ಸ್ವಚ್ಛತೆ ಜತೆಗೆ ಆರೋಗ್ಯದ ಕಾಳಜಿ ವಹಿಸುವುದರಿಂದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ನಂಜನಗೂಡು ಆಸ್ಪತ್ರೆಯ ವೈದ್ಯೆ ಡಾ.ಜಯಮಾಲ ಸಲಹೆ ನೀಡಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಶ್ರೀಗಂಧ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ತಿಂಗಳು ಋತುಚಕ್ರದ ಸಂದರ್ಭದಲ್ಲಿ ಅತಿಯಾಗಿ ಪ್ಯಾಡ್ ಬಳಸುವುದರಿಂದ ತೊಂದರೆಯಾಗಲಿದ್ದು, ಬದಲಿಗೆ ಮರುಬಳಕೆಯ ಕಪ್ ಬಳಸುವುದರಿಂದ ಸ್ವಚ್ಛತೆ ಕಾಪಾಡಿಕೊಳ್ಳಬಹುದಾಗಿದೆ. ಈ ವಯಸ್ಸಿನಲ್ಲಿ ಅಗತ್ಯದಷ್ಟು ನೀರು ಸೇವಿಸಬೇಕು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ನಿಮ್ಮ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಬೆಂಗಳೂರಿನ ಆತ್ಮಜ್ಯೋತಿ ಸ್ವಧ್ಯಾಯ ಮಿಷನ್‌ನ ಸಂಪನ್ಮೂಲ ವ್ಯಕ್ತಿ ರೇಖಾ ಶಶಿಧರ್ ಮಾತನಾಡಿ, ಆರೋಗ್ಯ, ಸ್ವಚ್ಛತೆ ಕಾಪಾಡಿಕೊಂಡಲ್ಲಿ ಸಂತೋಷ, ಆನಂದ ಹೆಚ್ಚಾಗುತ್ತದೆ. ಶಾರೀರಿಕ, ಭೌತಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ತೊಡಗಿಸಿಕೊಳ್ಳಬೇಕು. ಸ್ವಚ್ಛತೆ ಎಂದರೆ ದೇಹ ಶುದ್ಧಿ, ಚಿತ್ತಶುದ್ಧಿ ಬಗ್ಗೆ ಮಾರ್ಗದರ್ಶನ ನೀಡಿ, ಇವೆಲ್ಲವನ್ನು ಅನುಸರಿಸಿದಲ್ಲಿ ನಿಮ್ಮಲ್ಲಿ ಪ್ರಶಾಂತತೆ, ಲವಲವಿಕೆ ಮೂಡಲಿದೆ ಎಂದರು.
ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದ ಬಿಇಒ ಮಹದೇವ್ ಮಾತನಾಡಿ, ಶ್ರೀಗಂಧ ಫೌಂಡೇಶನ್ ಸಂಸ್ಥೆಯ ಯೋಧರು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗ ಉಳಿಸಿ, ಸರ್ಕಾರಿ ಶಾಲೆಗಳಿಗೆ ನೆರವು ಜತೆಗೆ ಮಾಹಿತಿ ಕಾರ್ಯಾಗಾರ ನಡೆಸುತ್ತಿರುವುದು ಹೆಮ್ಮೆ ಎಂದರು.
ಶ್ರೀಗಂಧ ಫೌಂಡೇಶನ್‌ನ ಯೋಧರಾದ ಭಾರ್ಗವಿ ಮತ್ತು ಸಿಆರ್‌ಪಿ ಪ್ರಶಾಂತ್, ಸಂಪನ್ಮೂಲ ವ್ಯಕ್ತಿ ವಿದ್ಯಾ, ಬಿ.ಆರ್.ಸಿ.ಹೇಮಲತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕುಮಾರ್, ಸಹಕಾರ ಸಂಘದ ಅಧ್ಯಕ್ಷ ಸ್ವಾಮಿ, ಉಪ ಪ್ರಾಚಾರ್ಯರಾದ ಗೀತಾ, ಶಿಕ್ಷಕ ವಿಶ್ವಪ್ರಕಾಶ್, ಶೇಷೇಗೌಡ ಮಾತನಾಡಿದರು.
ವೆಂಕಟರಮಣ ಪೆನಕೊಂಡೆ, ರೇಖಾ, ಮಹೇಶಾರಾಧ್ಯ, ಶಶಾಂತ್, ಲಕ್ಷ್ಮಣ್, ಶಿಕ್ಷಕರು ಮತ್ತು 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.