ಕನಕಪುರದ ಡಿ.ಕೆ.ಎಸ್. ಹಿಲ್ ವ್ಯೆ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಕೌನ್ಸಿಲ್ ಚುನಾವಣೆಯಲ್ಲಿ ಮತದಾನ ಮಾಡಿದ ಶಿಕ್ಷಕಿಯರು.  
ರಾಜ್ಯ

ಬಾಲ್ಯದಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಿ

ಕನಕಪುರ:

ಪ್ರಜಾಪ್ರಭುತ್ವದ ಮೌಲ್ಯ ಮತ್ತು ನಾಯಕತ್ವದ ಗುಣಗಳನ್ನು ಬಾಲ್ಯದಲ್ಲೇ ಮೈಗೂಡಿಸುವ ಉದ್ದೇಶದಿಂದ ನಗರದ ಪ್ರತಿಷ್ಠಿತ ಡಿ.ಕೆ.ಎಸ್.ಹಿಲ್ ವ್ಯೆ ಪಬ್ಲಿಕ್ ಶಾಲೆಯಲ್ಲಿ 2026-27ನೇ ಸಾಲಿನ ವ್ಯವಸ್ಥಿತ ಹಾಗೂ ರೋಚಕ ವಿದ್ಯಾರ್ಥಿ ಕೌನ್ಸಿಲ್ ಚುನಾವಣೆ ನಡೆಸಲಾಗಿದೆ ಎಂದು ಪ್ರಾಂಶುಪಾಲೆ ಅಂತೋಣಿ ಮೇರಿ ತಿಳಿಸಿದರು.

ತಾಲೂಕಿನ ಡಿ.ಕೆ.ಎಸ್. ಹಿಲ್ ವ್ಯೆ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ಕೌನ್ಸಿಲ್ ಚುನಾವಣೆ ಇ-ಮತದಾನದ ಮೂಲಕ ಪ್ರಜಾಪ್ರಭುತ್ವದ ಪಾಠ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲೇ ನಾಯಕತ್ವ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ವಿದ್ಯಾರ್ಥಿಗಳೊಂದಿಗೆ ಶಾಲೆಯ ಪ್ರತಿಯೊಬ್ಬರೂ ಭಾಗವಹಿಸಿ ಚುನಾವಣೆ ಯಶಸ್ವಿಗೊಳಿಸಿರುವುದು ಸಂತಸ ತಂದಿದೆ ಎಂದರು.
ಚುನಾವಣೆಯಲ್ಲಿ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿತ್ತು. ಶಾಲೆಯ ಶಿಸ್ತು, ಕ್ರೀಡೆ, ಸಂಸ್ಕೃತಿ ಮತ್ತು ನಾಯಕತ್ವ ವಹಿಸಿಕೊಳ್ಳಲು ಆಸಕ್ತರಿದ್ದ ವಿದ್ಯಾರ್ಥಿಗಳು ಉತ್ಸಾಹದಿಂದ ನಾಮಪತ್ರ ಸಲ್ಲಿಸಿ ಅಖಾಡಕ್ಕಿಳಿದಿದ್ದರು. ಅಭ್ಯರ್ಥಿಗಳು ತಮ್ಮದೇ ಆದ ಶೈಲಿಯಲ್ಲಿ ಮತಪ್ರಚಾರ ನಡೆಸಿ ಗಮನ ಸೆಳೆದರು. ಸಾಂಪ್ರದಾಯಿಕ ಮತದಾನದ ಜತೆಗೆ ತಾಂತ್ರಿಕತೆಗೆ ಆದ್ಯತೆ ನೀಡಿದ ಶಾಲಾ ಆಡಳಿತ ಮಂಡಳಿಯು ಎಲೆಕ್ಟ್ರಾನಿಕ್ ಮತದಾನ ಯಂತ್ರದ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಮೊದಲಿಗೆ ಪ್ರಾಂಶುಪಾಲೆ ಅಂತೋಣಿ ಮೇರಿ ತಮ್ಮ ಹಕ್ಕನ್ನು ಚಲಾಯಿಸಿದರು. ನಂತರ ಶಿಕ್ಷಕರು, ವಾಹನ ಚಾಲಕರು, ಸಹಾಯಕಿಯರು, ಕಚೇರಿ ಸಿಬ್ಬಂದಿ ಹಾಗೂ 5 ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಉತ್ಸಾಹದಿಂದ ಇ-ಮತದಾನ ಯಂತ್ರದ ಮೂಲಕ ಮತ ಚಲಾಯಿಸಿದರು.
ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಚುನಾಯಿತ ಪ್ರತಿನಿಧಿಗೆ ಶಾಲೆ ವಾರ್ಷಿಕ ನಾಯಕತ್ವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪದಗ್ರಹಣ ಮಾಡಿಸಲಾಗುವುದು ಎಂದರು.