ಗುಳೇದಗುಡ್ಡ ಪಟ್ಟಣದ ಕಾಡಸಿದ್ಧೇಶ್ವರ ಮಠದಲ್ಲಿ ಮೌನಯೋಗಿ ಜಾತ್ರಾ ಮಹೋತ್ಸವದ ನಿಮಿತ್ತ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಹೊಳೆ ಹುಚ್ಚೇಶ್ವರ ಶ್ರೀಗಳು ಉದ್ಘಾಟಿಸಿದರು. ಸರ್ಪಭೂಷಣ ದೇವರು, ರುದ್ರಮುನಿ ದೇವರು, ಪ್ರಕಾಶ ಅಂಕದ, ಚಿನ್ನು ಬಾರಾಟಕ್ಕೆ ಇತರರಿದ್ದರು.
- ಹೊಳೆ ಹುಚ್ಚೇಶ್ವರ ಶ್ರೀಗಳ ಹೇಳಿಕೆ
- ಜೀವನ ದರ್ಶನ ಪ್ರವಚನ ಕಾರ್ಯಕ್ರಮ
ಗುಳೇದಗುಡ್ಡ: ಬುದ್ಧ ಈ ಜಗತ್ತಿನ ಜ್ಞಾನಿ ಬಸವ ಸರ್ವ ಜನರ ಕಣ್ಣು ತೆರೆಸಿದ ಸಮಾಜಚಿಂತಕ ಅವರ ಚಿಂತನೆ, ಆದರ್ಶಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕೆಂದು ಕಮತಗಿ ಹುಚ್ಚೇಶ್ವರ ಸಂಸ್ಥಾನ ಮಠದ ಹೊಳೆ ಹುಚ್ಚೇಶ್ವರ ಶ್ರೀಗಳು ಹೇಳಿದರು.
ಪಟ್ಟಣದ ಕಾಡಸಿದ್ಧೇಶ್ವರ ಮಠದಲ್ಲಿ ಮೌನಯೋಗಿಯ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಜರುಗಿದ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಸಂಘ ಜೀವಿಯಾಗಬೇಕು, ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಭಗವಂತನ ಧ್ಯಾನ ಮಾಡಬೇಕು. ಪ್ರಾಣಿ, ಪಕ್ಷಿಗಳು ಜೀವಿಸುತ್ತವೆ ಆದರೆ ಮನುಷ್ಯ ಪ್ರಾಣಿ, ಪಕ್ಷಿಗಿಂತ ಭಿನ್ನವಾಗದೆ ಆದರ್ಶರಾಗಬೇಕು.
ಸಾನ್ನಿಧ್ಯ ವಹಿಸಿ ಅಭಿನವ ಕಾಡಸಿದ್ಧೇಶ್ವರ ಶ್ರೀಗಳು ಮಾತನಾಡಿ, ಹಿರಿಯ ಪೂಜ್ಯರು ನಡೆದಾಡುವ ದೇವರಾಗಿದ್ದರು. ಧರ್ಮದಂತೆ ನಡೆದು ಭಕ್ತ ವರ್ಗದವರಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿದ್ದಾರೆ. ಅವರ ಆಲೋಚನೆಗಳನ್ನು ನಾವು ರೂಢಿಸಿಕೊಳ್ಳಬೇಕು ಎಂದರು.
ದುಮ್ಮವಾಡದ ಸರ್ಪಭೂಷಣ ದೇವರು ಜೀವನ ದರ್ಶನ ಪ್ರವಚನ ನೀಡಿ, ಮನುಷ್ಯ ಬುದ್ಧಿವಂತ ಪ್ರಾಣಿ, ಉತ್ತಮ ಸದಾಚಾರ ನಮ್ಮದಾಗಬೇಕು, ದೇವರು ಧರ್ಮದ ಆಚರಣೆ ಸರಳವಾಗಿದ್ದು ಉತ್ತಮ ಚಿಂತನೆ ರೂಢಿಸಿಕೊಳ್ಳಬೇಕು. ಹುಟ್ಟು ಸಾವಿನ ಮಧ್ಯ ಉತ್ತಮ ಸಂಸ್ಕಾರ, ಎಲ್ಲರೂ ಒಂದು ಎನ್ನುವ ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದರು. ರುದ್ರಮುನಿ ದೇವರು ಮಾತನಾಡಿದರು.
ಪ್ರಕಾಶ ಅಂಕದ, ಚಿನ್ನು ಬಾರಾಟಕ್ಕೆ, ಸಂಗಪ್ಪ ಜವಳಿ, ಮಲ್ಲಿಕಾರ್ಜುನ ಹಿರೇಮಠ, ಮುತ್ತಣ್ಣ ದೇವರಮನಿ, ಭೀಮಪ್ಪ ಹಳ್ಳಿಗೋಳ ಇತರರಿದ್ದರು.