Cultivate an environmental consciousness through Kannada poetry. 
ರಾಜ್ಯ

ಕನ್ನಡ ಕಾವ್ಯಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಿ

ಬಂಗಾರಪೇಟೆ: ಪರಿಸರದ ಕುರಿತು ಕಾಳಜಿ ಮನೆಗಳಿಂದಲೇ ಆರಂಭವಾಗಿ ಜಗತ್ತಿನ ಸುಸ್ಥಿರ ನೆಲೆಗೆ ಕಾರಣವಾಗಬೇಕು. ಪಂಪ, ರನ್ನ, ಪೊನ್ನ, ಕೆ.ಎಸ್​.ನರಸಿಂಹಸ್ವಾಮಿ ಮೊದಲಾದ ಕನ್ನಡ ಕವಿಗಳು ತಮ್ಮ ಕಾವ್ಯಗಳಲ್ಲಿ ಪರಿಸರದ ಕುರಿತು ಅಭಿಮಾನ, ಗೌರವ, ಕಾಳಜಿ ವ್ಯಕ್ತಪಡಿಸಿದ್ದಾರೆ ಎಂದು ಸಾಹಿತಿ ಡಾ.ಶ್ರೀನಿವಾಸ ಪ್ರಸಾದ್​ ತಿಳಿಸಿದರು.
ಬಂಗಾರಪೇಟೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಚಕೋರ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕಾವ್ಯಗಳಲ್ಲಿ ಪರಿಸರದ ಪ್ರಜ್ಞೆ ವಿಷಯದ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.
ಚಕೋರ ಬಳಗದ ಸಂಸ್ಥಾಪಕ ಅಧ್ಯಕ್ಷ ಜ.ಮು.ಚಂದ್ರ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸು ರೂಪುಗೊಳ್ಳುವ ಹಂತದಲ್ಲಿದ್ದು, ಈಗಿನಿಂದಲೇ ಪರಿಸರದ ಕುರಿತು ಕರ್ತವ್ಯ ಪ್ರಜ್ಞೆ ಬೆಳೆಸಿಕೊಂಡು ನಾಡು, ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
ಅನಿಕೇತನ ಬಳಗದ ಎಂ.ಎಸ್​.ರಾಮಪ್ರಸಾದ್​ ಮಾತನಾಡಿ, ಜಿಲ್ಲೆಯಲ್ಲಿ ಹಲವು ದಶಕಗಳಿಂದ ನಡೆಸಿಕೊಂಡು ಬಂದ ಕನ್ನಡಪರ ಕಾರ್ಯಕ್ರಮಗಳನ್ನು ಸ್ಮರಿಸಿ, ಇಂದಿನ ಯುವಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ, ಎಚ್ಚರಿಕೆ ಮತ್ತು ನಿಷ್ಠೆ ಬೆಳೆಸುವುದು ಅಗತ್ಯ ಎಂದರು.
ಪ್ರಾಂಶುಪಾಲ ನಾಗಾನಂದ ಕೆಂಪರಾಜು ಮಾತನಾಡಿ, ಕುವೆಂಪು, ನಿಸಾರ್​ ಅಹ್ಮದ್​, ಕೆ.ಎಸ್​.ನರಸಿಂಹಸ್ವಾಮಿ ಮೊದಲಾದ ಕವಿಗಳು ತಮ್ಮ ಕಾವ್ಯಗಳಲ್ಲಿ ನಿಸರ್ಗದ ಸೌಂದರ್ಯ ಮತ್ತು ಪರಿಸರದ ಮಹತ್ವ ಸಾರಿದ್ದು, ವಿದ್ಯಾರ್ಥಿಗಳು ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹಸಿರೇ ಉಸಿರು ಎಂಬ ಸಂದೇಶ ಸಾರ್ಥಕಗೊಳಿಸಬೇಕು ಎಂದರು.