- * 10 ದಿನಗಳಲ್ಲಿ 15 ಟನ್ ಮಾವು ಹಾಗೂ 2 ಟನ್ ಹಲಸು ಮಾರಾಟ
- * ಮೇಳದಲ್ಲಿ ರೈತರಿಂದ ನೇರ 20 ಲಕ್ಷ ರೂ. ಅಧಿಕ ವಹಿವಾಟು
ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮವು ಇದೇ ಮೊದಲ ಬಾರಿಗೆ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಿದ್ದ ಮಾವು ಮತ್ತು ಹಲಸು ಮೇಳದಲ್ಲಿ ಸುಮಾರು 15 ಟನ್ ಮಾವು ಹಾಗೂ 2 ಟನ್‌ಗೂ ಅಧಿಕ ಹಲಸು ಮಾರಾಟವಾಗಿದ್ದು, ಭಾನುವಾರ ಮೇಳಕ್ಕೆ ತೆರೆ ಬಿದ್ದಿತ್ತು.
ಹತ್ತು ದಿನಗಳ ಕಾಲ ನಡೆಯದ ಮೇಳದಲ್ಲಿ 16 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿದ್ದು, ಜತೆಗೆ ಮಾವು ಮತ್ತು ಹಲಸಿನಿಂದ ತಯಾರಿಸಿದ ಉತ್ಪನ್ನಗಳ ಮಾರಾಟವೂ ಸೇರಿ 20 ಲಕ್ಷ ಅಧಿಕ ವಹಿವಾಟು ನಡೆದಿದೆ.
ಮೇಳದಲ್ಲಿ ಮಾವು ಮತ್ತು ಹಲಸು ಹಣ್ಣುಗಳ ಬೆಳೆಗಾರರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿದ್ದರಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ತಮ್ಮ ಬೆಳೆಗೆ ತಾವೇ ದರ ನಿಗದಿ ಪಡಿಸಿ ಮಾರಾಟ ಮಾಡಿದರೆ, ಮತ್ತೊಂದೆಡೆ ಗ್ರಾಹಕರು ರಸಾಯನಿಕ ಮುಕ್ತ ನೈಸರ್ಗಿಕವಾಗಿ ಮಾಗಿದ ತಾಜಾ ಹಣ್ಣುಗಳನ್ನು ಯೋಗ್ಯ ಬೆಲೆಗೆ ಖರೀದಿಸಲು ಈ ಮೇಳದ ಮೂಲಕ ವೇದಿಕೆ ಒದಗಿಸಲಾಗಿತ್ತು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ತಿಳಿಸಿದರು.
ಈ ಮೇಳದಲ್ಲಿ 50 ಮಾವಿನ ಮಳಿಗೆಗಳು, 7 ಹಲಸು ಮಳಿಗೆಗಳನ್ನು ತೆರೆಯಲಾಗಿತ್ತು. ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹತ್ತು ದಿನಗಳ ಮೇಳದಲ್ಲಿ ನಿರೀಕ್ಷೆಗೂ ಮೀರಿದ ಮಾರಾಟ ನಡೆದಿದೆ. ಜಿಐ ಮಾನ್ಯತೆ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಕರಿ ಇಶಾಡ್, ಚಾಲ್ತಿ ಮಾವು, ಬಾದಾಮಿ, ಮಲ್ಲಿಕಾ, ಸೇಂದೂರ, ರಸಪುರಿ ಮತ್ತಿತರ ಮಾವಿನ ತಳಿಗಳು, ರುದ್ರಾಕ್ಷಿ, ಶಿವರಾತ್ರಿ ಮತ್ತು ತೂಬುಗೆರೆ, ಲಾಲ್‌ಬಾಗ್ ಮಧುರ ಮತ್ತಿತರ ಹಲಸಿನ ತಳಿಗಳನ್ನು ಮಾರಾಟ ಮಾಡಲಾಗಿತ್ತು. ಈ ಮೇಳವು ಮುಗಿದಿದ್ದು, ವಿಸ್ತರಣೆ ಮಾಡುವುದಿಲ್ಲ. ಈ ತಿಂಗಳಾಂತ್ಯದಲ್ಲಿ ಲಾಲ್‌ಬಾಗ್‌ನಲ್ಲಿ ಮೇಳವನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.