ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಸಿಟಿಇಟಿ ಪರೀಕ್ಷೆಯು ಸೆ.6ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪತ್ರಿಕೆ-2 ಮತ್ತು ಅದೇ ದಿನ ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಪತ್ರಿಕೆ-1ರ ಪರೀಕ್ಷೆ ನಿಗದಿ
- ಸಿಬಿಎಸ್‌ಇ ಮೇ 8ರಂದು ಅಧಿಸೂಚನೆ ಪ್ರಕಟಿಸಿ, ಅಂದೇ ಪರೀಕ್ಷೆ ದಿನಾಂಕವನ್ನು ಕೂಡ ನಿಗದಿ
- ಒಂದು ವೇಳೆ ಸೆ.6ರಂದೇ ಪರೀಕ್ಷೆ ನಡೆಸಿದರೆ, ಬಿಎ/ಬಿಎಸ್‌ಸಿ ಬಿ.ಇಡಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಎರಡರಲ್ಲಿ ಒಂದು ಪರೀಕ್ಷೆಯಿಂದ ವಂಚಿತ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೆ.6ರಂದು ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ ನಿಗದಿ ಮಾಡಿದ್ದು, ಅದೇ ದಿನ ಕೇಂದ್ರ ಸರ್ಕಾರವು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ) ನಿಗದಿಯಾಗಿರುವುದರಿಂದ ಬಿ.ಇಡಿ ಅಭ್ಯರ್ಥಿಗಳಿಗೆ ಪರೀಕ್ಷೆ ಕೈತಪ್ಪಲಿದೆ. ಈ ಕಾರಣದಿಂದ ಕಾನ್‌ಸ್ಟೆಬಲ್ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ.
ಸಿಟಿಇಟಿ ಪರೀಕ್ಷೆಯು ಸೆ.6ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪತ್ರಿಕೆ-2 ಮತ್ತು ಅದೇ ದಿನ ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಪತ್ರಿಕೆ-1ರ ಪರೀಕ್ಷೆ ನಿಗದಿಯಾಗಿದೆ. ಸಿಬಿಎಸ್‌ಇ ಮೇ 8ರಂದು ಅಧಿಸೂಚನೆ ಪ್ರಕಟಿಸಿ, ಅಂದೇ ಪರೀಕ್ಷೆ ದಿನಾಂಕವನ್ನು ಕೂಡ ನಿಗದಿ ಮಾಡಿತ್ತು. ಆದರೆ, ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ (ಉಳಿಕೆ ಮೂಲ ವೃಂದ 1,421 ಹುದ್ದೆಗಳು), ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ (ಸ್ಥಳೀಯ ವೃಂದದ 371ಜೆ ಮೀಸಲಾತಿ ಅನ್ವಯ 179 ಹುದ್ದೆಗಳು) ಸೇರಿ ಒಟ್ಟು 1,600 ಹುದ್ದೆಗಳಿಗೆ ಜೂ.19ರಂದು ಅಧಿಸೂಚನೆ ಪ್ರಕಟಿಸಿದೆ.
ಒಂದು ವೇಳೆ ಸೆ.6ರಂದೇ ಪರೀಕ್ಷೆ ನಡೆಸಿದರೆ, ಬಿಎ/ಬಿಎಸ್‌ಸಿ ಬಿ.ಇಡಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಎರಡರಲ್ಲಿ ಒಂದು ಪರೀಕ್ಷೆಯಿಂದ ವಂಚಿತರಾಗಬೇಕಾಗುತ್ತದೆ. ಕೆಇಎ ಅಧಿಸೂಚನೆಗೂ ಮೊದಲೇ ಸಿಬಿಎಸ್‌ಇ ಅಧಿಸೂಚನೆ ಪ್ರಕಟಿಸಿದ್ದರಿಂದ ಕೆಇಎ ಪೊಲೀಸ್ ಪರೀಕ್ಷೆಯನ್ನು ಸೆ.27ಕ್ಕೆ ಮುಂದೂಡಿದರೆ ಅನುಕೂಲವಾಗಲಿದೆ ಎಂದು ಹುದ್ದೆ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ.