ಚಿಂಚೋಳಿ ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದಲ್ಲಿ ಕೊಡ ನೀರಿಗಾಗಿ ಟ್ಯಾಂಕರ್​ಗೆ ಮುಗಿಬಿದ್ದಿರುವ ಮಹಿಳೆಯರು. 
ರಾಜ್ಯ

ಸುಡು ಬಿಸಿಲಲ್ಲಿ ಕೊಡ ನೀರಿಗಾಗಿ ಹಾಹಾಕಾರ

ಚಿಂಚೋಳಿ : ಚಿಮ್ಮಾಇದಲಾಯಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ನಿತ್ಯವೂ ಹನಿ ಜಲಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಹನುಮಾನ ಮಂದಿರ, ಹಳೇ ಗ್ರಾಮ ಪಂಚಾಯಿತಿ ಕಚೇರಿ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಬಡಾವಣೆಯಲ್ಲಿ ಮಹಿಳೆಯರು, ಮಕ್ಕಳು, ವಯೋ ವೃದ್ಧರು ಕೊಡ ನೀರಿಗಾಗಿ ಬೀದಿಗಿಳಿಯುವಂತ ಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಳೆದ ಎರಡು ದಿನಗಳಿಂದ ನಿತ್ಯವೂ ಎರಡು ಬಾರಿ ಟ್ಯಾಂಕರ್​ ನೀರು ಪೂರೈಕೆ ಮಾಡುತ್ತಿದ್ದು, ಅದು ಇಡೀ ಹಳ್ಳಿ ಜನತೆಗೆ ಸಾಕಾಗುತ್ತಿಲ್ಲ. ಕೊಡ ನೀರು ಪಡೆಯುವುದಕ್ಕೂ ಹರಸಾಹಸ ಪಡುವ ಸ್ಥಿತಿ ಇದೆ.
ಗ್ರಾಮಕ್ಕೆ ನೀರು ಪೂರೈಸುವ ಮೂರು ಕೊಳವೆ ಬಾವಿಗಳ ಮೋಟಾರ್​ ಸುಟ್ಟು ಹೋಗಿ ವಾರ ಕಳೆದರೂ ದುರಸ್ತಿ ಮಾಡುವ ಕೆಲಸವಾಗಿಲ್ಲ. ಇದು ಜಲ ಸಮಸ್ಯೆಗೆ ಮೂಲ ಕಾರಣವಾಗಿದೆ. ಗ್ರಾಪಂ ಅಧಿಕಾರಿಗಳು ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂಬುದು ಸ್ಥಳಿಯರ ದೂರಾಗಿದೆ.
ಕೂಡಲೇ ಕೆಟ್ಟಿರುವ ಮೋಟಾರ್​ಗಳನ್ನು ದುರಸ್ತಿ ಮಾಡಬೇಕು, ಅಲ್ಲದೆ ಹೊಸ ಕೊಳವೆ ಬಾವಿ ಕೊರೆದು ಗ್ರಾಮಕ್ಕೆ ಸಮರ್ಪಕ ನೀರು ಸರಬರಾಜು ಮಾಡಬೇಕು ಎಂಬುದು ಜನರ ಒಕ್ಕೊರಲ ಒತ್ತಾಯವಾಗಿದೆ.
"

ಚಿಮ್ಮಾಇದಲಾಯಿ ಗ್ರಾಮದಲ್ಲಿ ಕಳೆದ ಐದು ದಿನಗಳಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿದ್ದಾರೆ. ಕೂಡಲೇ ಹೊಸ ಕೊಳವೆ ಬಾವಿ ಕೊರೆದು ಜಲ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ.

— > ಯಲ್ಲಾಲಿಂಗ ದಂಡಿನ್​, ಚಿಮ್ಮಇದಲಾಯಿ
"

ಚಿಮ್ಮಾಇದಲಾಯಿ ಗ್ರಾಮದ ನೀರಿನ ಸಮಸ್ಯೆ ಗಮನಕ್ಕೆ ಬಂದಿದ್ದು, ಕಳೆದ ಎರಡು ದಿನಗಳಿಂದ ತಾತ್ಕಾಲಿಕವಾಗಿ ಟ್ಯಾಂಕರ್​ ಮೂಲಕ ನೀರು ಪೂರೈಸಲಾಗುತ್ತಿದೆ. ಕೆಟ್ಟು ಹೋಗಿರುವ ಕೊಳವೆಬಾವಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಹೊಸ ಬೋರ್​ವೆಲ್​ ಕೊರೆಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.

— > ಮಲ್ಲಿಕಾರ್ಜುನ ಗುತ್ತೇದಾರ್​, ಗ್ರಾಪಂ ನೋಡಲ್​ ಅಧಿಕಾರಿ, ಚಿಮ್ಮಇದಲಾಯಿ