ನವದೆಹಲಿ: ಇತ್ತೀಚಿನ ವಿಧಾನ ಪರಿಷತ್ ಚುನಾವಣಯಲ್ಲಿ ನಡೆದ ಅಡ್ಡ ಮತದಾನ(Cross Voting) ಪ್ರಕರಣದ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಸವಿಸ್ತಾರವಾಗಿ ಚರ್ಚೆ ನಡೆಸಲಾಗಿದ್ದು, ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರನ್ನು(ನಿತಿನ್ ನಬಿನ್) ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಡ್ಡ ಮತದಾನ ವಿಚಾರದ ಸಂಪೂರ್ಣ ಮಾಹಿತಿಯನ್ನು ಪಕ್ಷದ ಕೇಂದ್ರ ನಾಯಕತ್ವದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಈ ವಿಚಾರ ನಮಗೆ ಬಿಡಿ ಎಂದ ರಾಷ್ಟ್ರೀಯ ಅಧ್ಯಕ್ಷರು
ಆರ್. ಅಶೋಕ್ ಮಾತನಾಡಿ, ತಾವು ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಅಡ್ಡ ಮತದಾನದ ವಿಚಾರವಾಗಿ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು."ನಾವು ಭೇಟಿ ಮಾಡುವ ಮುನ್ನವೇ ರಾಷ್ಟ್ರೀಯ ಅಧ್ಯಕ್ಷರು ಈ ಸಂಬಂಧ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಎಲ್ಲರೂ ನೀಡಿರುವ ಮಾಹಿತಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ" ಎಂದರು. "ಈ ವಿಚಾರವನ್ನು ನಮಗೆ ಬಿಡಿ. ಮುಂದಿನ ಕ್ರಮವನ್ನು ನಾವು ತೆಗೆದುಕೊಳ್ಳುತ್ತೇವೆ. ಯಾರು ದ್ರೋಹ ಮಾಡಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಅಧ್ಯಕ್ಷರು ಸ್ಪಷ್ಟವಾಗಿ ತಿಳಿಸಿದ್ದಾರೆ" ಎಂದು ಅಶೋಕ್ ಹೇಳಿದರು.
ವಿಜಯೇಂದ್ರ ಹೇಳಿದ್ದೇನು?
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಅಡ್ಡ ಮತದಾನ ವಿಚಾರವನ್ನು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ಸವಿಸ್ತಾರವಾಗಿ ತರಲಾಗಿದೆ ಎಂದು ಹೇಳಿದರು. "ಅವರ ಬಳಿಯೂ ಈ ಸಂಬಂಧ ಸಾಕಷ್ಟು ಮಾಹಿತಿಗಳಿದ್ದವು. ಎಲ್ಲ ಮಾಹಿತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ" ಎಂದು ತಿಳಿಸಿದರು.
ಸಂಘಟನೆ ಬಲವರ್ಧನೆ ಕುರಿತು ಚರ್ಚೆ
ಅಡ್ಡ ಮತದಾನ ಪ್ರಕರಣದ ಜತೆಗೆ ಪಕ್ಷ ಸಂಘಟನೆ ವಿಚಾರವಾಗಿಯೂ ಚರ್ಚೆ ನಡೆದಿರುವುದಾಗಿ ಇಬ್ಬರು ನಾಯಕರು ತಿಳಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕತ್ವದೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ವಿಜಯೇಂದ್ರ ಹೇಳಿದರು. ಬಿಜೆಪಿ ಸಂಘಟನೆ ಬಲವರ್ಧನೆ, ಪಕ್ಷದ ಕಾರ್ಯತಂತ್ರ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತೂ ಸಭೆಯಲ್ಲಿ ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ.