ಕಲಬುರಗಿ ತಾಲೂಕು ಅವರಾದ(ಬಿ) ಸೇರಿ ವಿವಿಧ ಗ್ರಾಮದ ಜಮೀನುಗಳಿಗೆ ಸೋಮವಾರ ಭೇಟಿ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ರೈತರ ಅಹವಾಲು ಆಲಿಸಿದರು. ಶಾಸಕರಾದ ಬಸವರಾಜ ಮತ್ತಿಮಡು, ತಿಪ್ಪಣ್ಣಪ್ಪ ಕಮಕನೂರ, ಡಿಸಿ ಇಕ್ರಮ್ ಶರೀಫ್, ಕೃಷಿ ಜೆಡಿ ಸಮದ್ ಪಟೇಲ್ ಇತರರಿದ್ದರು.
- ಬರ ಸ್ಥಿತಿ ವೀಕ್ಷಿಸಿದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
- ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ
ಕಲಬುರಗಿ: ಸೂಪರ್ ಎಲ್ ನಿನೋ ಪರಿಣಾಮ ಶೇ.75 ಮಳೆ ಕೊರತೆಯಿಂದ ರಾಜ್ಯದಲ್ಲಿ ಬರದ ಛಾಯೆ ಅವರಿಸಿದೆ. ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಎಂದು ಜಿಲ್ಲಾ ಉಸ್ತುವಾರಿ (ಪ್ರಕೃತಿ ವಿಕೋಪ) ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅವರಾದ(ಬಿ) ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಸರ್ವೇ ನಂ.67/6ರಲ್ಲಿನ ವಿಮಲಾಬಾಯಿ ಅಂಬಾರಾಯ ಮತ್ತು ಸರ್ವೇ ನಂ.67/7ರ ಶಕುಂತಲಾ ಸೂರ್ಯಕಾಂತ ಅವರ ಹೊಲದಲ್ಲಿ ಮಳೆ ಇಲ್ಲದೆ ಹಾಳಾದ ಬೆಳೆ ಪ್ರದೇಶ ವೀಕ್ಷಿಸಿ ಮಾತನಾಡಿದ ಅವರು, ಸಿಎಂ ನಿರ್ದೇಶನದಂತೆ ಕ್ಷೇತ್ರ ಭೇಟಿ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿನ ಬರ ಸ್ಥಿತಿ ಕುರಿತು ಈಗಾಗಲೇ ಸಿಎಂ-ಡಿಸಿಎಂ ಕೇಂದ್ರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದಾರೆ. ಕೇಂದ್ರದ ಎನ್ಡಿಆರ್ಎಫ್ ಕಠಿಣ ನಿಯಮಾವಳಿಯಿಂದ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ನಿಯಮ ಸರಳಗೊಳಿಸಬೇಕೆಂಬ ರಾಜ್ಯದ ಬೇಡಿಕೆಗೆ ಕೇಂದ್ರ ಸರ್ಕಾರ ಪುರಸ್ಕರಿಸಬೇಕು ಎಂದು ಕೋರಿದರು.
ಈಗಾಗಲೇ 50 ಸಾವಿರ ರೂ. ಖರ್ಚು ಮಾಡಿ ಡಿಎಪಿ ಗೊಬ್ಬರ, ಬೀಜ ಹಾಕಿ ಉದ್ದು ಬಿತ್ತೀವ್ರಿ. ಮಳೆ ಇಲ್ದೆ ಬೆಳೆ ಹಾಳಾಗ್ಯಾದ್ರಿ. ಇದೀಗ 4 ಎಕರೆಯಲ್ಲಿ ತೊಗರಿ ಬಿತ್ತಿದ್ದು, ಇದು ಸಹ ಕೈಗೆ ಹತ್ತಲ್ರಿ. ನಮಗ ಪರಿಹಾರ ಕೊಡಿಸ್ರಿ ಎಂದು ವಿಮಲಾಬಾಯಿ ಸಚಿವರಲ್ಲಿ ಬೇಡಿಕೆ ಇಟ್ಟರು.
ಕಲಬುರಗಿ: ರಾಜ್ಯದಲ್ಲಿ ಬಿಜೆಪಿ ನಾಯಕರು ಬರ ರಾಜಕೀಯ ಮೂಲಕ ಸರ್ಕಾರದ ವಿರುದ್ಧ ಬೊಬ್ಬೆ ಹೊಡೆಯುವ ನಾಟಕವಾಡುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು. ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ಬರ ಘೋಷಣೆ ಮಾಡಲಾಗುತ್ತದೆ ಎಂಬುದು ಬಿಜೆಪಿಯವರಿಗೂ ಗೊತ್ತಿದೆ. ಆದರೂ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಸೋಮವಾರ ಸುದ್ದಿಗಾರರಿಗೆ ಹೇಳಿದರು. ಎನ್ಡಿಆರ್ಎಫ್ ನಿಯಮಾವಳಿ ಸರಳಗೊಳಿಸಲು ತಮ್ಮದೇ ಆದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬಿಜೆಪಿ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಸಮಸ್ಯೆ ನಿಮ್ಮ ಬಳಿಯೇ ಇದೆ. ಅದಕ್ಕೆ ಪರಿಹಾರ ದೊರೆತರೆ ರೈತರಿಗೂ ಅನುಕೂಲವಾಗಲಿದೆ. ರೈತರ ಹಿತಾಸಕ್ತಿ ಕಾಪಾಡುವುದಾದರೆ ನಿಯಮಾವಳಿ ಸರಳೀಕರಣ ಮಾಡಿಸಲಿ ಎಂದು ಸವಾಲು ಹಾಕಿದರು.
ಕಳಪೆ ಆಹಾರ ಸೇವಿಸಿ ಮಕ್ಕಳು ಅಸ್ವಸ್ಥರಾಗುತ್ತಿರುವ ಹಿನ್ನೆಲೆಯಲ್ಲಿ ವಸತಿನಿಲಯ, ಶಾಲೆಗಳಿಗೆ ಭೇಟಿ ನೀಡಿ ಗುಣಮಟ್ಟದ ಆಹಾರ ಪೂರೈಕೆ, ಶುಚಿತ್ವ ಮತ್ತು ನೈರ್ಮಲ್ಯ ಕುರಿತು ಪರಿಶೀಲಿಸುವಂತೆ ಡಿಸಿ, ಜಿಪಂ ಸಿಇಒಗೆ ನಿರ್ದೇಶನ ನೀಡಲಾಗಿದೆ.> ಪ್ರಿಯಾಂಕ್ ಖರ್ಗೆಜಿಲ್ಲಾ ಉಸ್ತುವಾರಿ ಸಚಿವ