DK Shivakumar | ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್
ಹಾವೇರಿ: ಸರ್ಕಾರದ 1000 ದಿನಗಳ ಸಾಧನೆ ರಾಜ್ಯದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದ್ದು, ನಿಮ್ಮ ಋಣ ತೀರಿಸಲು ನಾವೆಲ್ಲಾ ಇಲ್ಲಿಗೆ ಬಂದಿದ್ದೇವೆ. ನಿಮ್ಮ ಕೆಲಸ ಮಾಡುವುದು ನಮ್ಮ ಜವಾಬ್ದಾರಿಯಾಗಿದ್ದು, ಹೀಗಾಗಿ ನುಡಿದಂತೆ ನಡೆದು ಎಲ್ಲರ ಆಶೀರ್ವಾದ ಪಡೆಯಲಿಕ್ಕೆ ಇಲ್ಲಿಗೆ ಬಂದಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DKShivakumar) ಹೇಳಿದರು.
ಹಾವೇರಿಯಲ್ಲಿ ಹಮ್ಮಿಕೊಂಡಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ ಡಿಕೆಶಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರಿಗೆ ರಾಜ್ಯದ ಎಲ್ಲಾ ಭೂಮಾಲೀಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಅನೇಕ ಸಲ ಹೇಳಿದ್ದೆ, ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದಿದ್ದಕ್ಕೆ 5 ಗ್ಯಾರಂಟಿಗಳ ಜೊತೆಗೆ ಇದೀಗ 6ನೇ ಭೂಮಿ ಗ್ಯಾರಂಟಿಯನ್ನು ನೀಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿರುವ ಎಲ್ಲಾ ಭೂ ಮಾಲೀಕರಿಗೆ ನಮ್ಮ ಸರ್ಕಾರ ಪೋಡಿ, ಪಟ್ಟಾ ಹಾಗೂ ಆಸ್ತಿ ದಾಖಲೆಗಳನ್ನು ನೀಡಿದೆ. 5 ಗ್ಯಾರಂಟಿಗಳನ್ನು ಎಲ್ಲಾ ಪಕ್ಷದವರು ಕಾಪಿ ಮಾಡಿದ್ದಕ್ಕೆ, ಇದನ್ನು ಈ ದೇಶದ ಗ್ಯಾರಂಟಿಯಾಗಿ ನೀಡಿದ್ದೇವೆ. ಗ್ಯಾರಂಟಿಗಳಿಗೂ ಸಾವಿಲ್ಲ, ಅಭಿವೃದ್ಧಿಗೂ ಸಾವಿಲ್ಲ. ಆದರೆ ಟೀಕೆಗಳಿಗೆ ಸಾವಿದೆ. ಆರೋಪಕ್ಕೆ ಸಾವಿದೆ. ಅಪಪ್ರಚಾರಕ್ಕೆ ಸಾವಿದೆ. ಕೃಷ್ಣಭೈರೇಗೌಡರು ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜನರ ಋಣವನ್ನು ತೀರಿಸಬೇಕೆಂದು ನಿರ್ಧರಿಸಿದ್ದಾರೆ ಎಂದು ಹೇಳಿದರು.
ದೇವರು ಕೊಟ್ಟ ಅವಕಾಶದಲ್ಲಿ ನಿಮಗೆ ಭೂಮಿ ಗ್ಯಾರಂಟಿ ಕೊಟ್ಟು ನಿಮ್ಮ ಬದುಕಿನಲ್ಲಿ ಹೊಸ ಧೈರ್ಯವನ್ನು ತುಂಬುತ್ತಿದ್ದೇವೆ. ಪಂಚ ಗ್ಯಾರಂಟಿಗಳಿಂದ ಜನರು ನೆಮ್ಮದಿಯಾಗಿ ಬದುಕುತ್ತಿದ್ದಾರೆ. ವಿಪಕ್ಷದವರು ಭಾವನೆಗಳ ಮೇಲೆ ರಾಜಕೀಯ ಮಾಡಿದರೆ, ನಾವು ಬದುಕಿನ ಮೇಲೆ ರಾಜಕೀಯ ಮಾಡ್ತಿದ್ದೀವಿ. ಜನರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.