ಸಚಿವ ಡಾ. ಶರಣಪ್ರಕಾಶ ಪಾಟೀಲ್ 
ರಾಜ್ಯ

ಸರ್ಕಾರದಿಂದ ಕ್ರೆಡಿಟ್ ಸಹಕಾರ ಸಂಘ: ಶರಣಪ್ರಕಾಶ ಪಾಟೀಲ್ ಹೇಳಿಕೆ -Sharanaprakash Patil

ಬೆಂಗಳೂರು: ಸರ್ಕಾರದಿಂದ ಸ್ಥಾಪಿಸಲಾಗುತ್ತಿರುವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮೂಲಕ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಹಾಗೂ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸೇರಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಯಮಹಲ್ ಪ್ಯಾಲೇಸ್‌ನಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ‘ನಮ್ಮ ಸರಸ್ ಮೇಳ-2026’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಮಾಸಾಂತ್ಯದೊಳಗೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಾರ್ಯಾರಂಭ ಮಾಡಲಿದೆ. ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಮಹಿಳಾ ಸ್ವ-ಸಹಾಯ ಸಂಘಗಳಿವೆ. ಅವುಗಳನ್ನು ಸಬಲಗೊಳಿಸುವ ಉದ್ದೇಶದಿಂದ ತಲಾ 1.50 ಲಕ್ಷ ರೂ. ಬಂಡವಾಳ ನಿಧಿ ನೀಡಲಾಗಿದೆ. ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ಆರ್ಥಿಕ ನೆರವು ಒದಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಮಹಿಳಾ ಸ್ವ-ಸಹಾಯ ಸಂಘಗಳ ಉತ್ಪನ್ನಗಳ ನಿರಂತರ ಮಾರಾಟಕ್ಕಾಗಿ ರೊಟೇಷನ್ ಮಾದರಿಯಲ್ಲಿ ಮಳಿಗೆಗಳನ್ನು ಒದಗಿಸಲು, ಬೆಂಗಳೂರು ಸಂತೆ ಎಂಬ ಕಾರ್ಯ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಅಧಿಕಾರಿಗಳು ಸರಸ್ ಮೇಳದಲ್ಲಿರುವ ಪ್ರತಿ ಮಳಿಗೆಗೂ ತೆರಳಿ ಅಲ್ಲಿರುವ ಮಹಿಳೆಯರಿಂದ ಸಲಹೆ ಮತ್ತು ಸಮಸ್ಯೆಗಳನ್ನು ಆಲಿಸಬೇಕು. ಅವರಿಗೆ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಡಬೇಕು. ಅವರ ಉತ್ಪನ್ನಗಳಿಗೆ ಅಗತ್ಯವಿರುವ ಬ್ರ್ಯಾಂಡಿಂಗ್, ಮಾರ್ಕೆಟ್ ಸಂಪರ್ಕ ಸೇರಿ ಇತರ ಸೌಲಭ್ಯ ಕಲ್ಪಿಸಲು ಸೂಕ್ತ ಯೋಜನೆ ರೂಪಿಸಬೇಕು ಎಂದು ಡಾ. ಶರಣಪ್ರಕಾಶ ಪಾಟೀಲ್ ಸಲಹೆ ನೀಡಿದರು.
ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭೋದ್ ಯಾದವ್, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ವಾಸಿರೆಡ್ಡಿ ವಿಜಯ ಜ್ಯೋತ್ಸ್ನ, ಉದ್ಯೋಗ ಹಾಗೂ ಕೈಗಾರಿಕಾ ತರಬೇತಿ ಇಲಾಖೆ ಆಯುಕ್ತೆ ಎಂ. ಶಿಲ್ಪಾ ಸೇರಿ ಮತ್ತಿತರರಿದ್ದರು.
27ರವರೆಗೆ ಮೇಳ
‘ನಮ್ಮ ಸರಸ್ ಮೇಳವು 27ರವರೆಗೆ ನಡೆಯಲಿದೆ. ಸ್ವ-ಸಹಾಯ ಸಂಘಗಳ ಮಹಿಳೆಯರು ತಯಾರಿಸಿರುವ ಗೃಹೋಪಯೋಗಿ ವಸ್ತುಗಳು, ಉಡುಪು, ಸಾಂಪ್ರದಾಯಿಕ ವಿನ್ಯಾಸದ ವಸ್ತುಗಳು, ಕೈಚೀಲ, ಸೀರೆ, ಕರಕುಶಲ ಉತ್ಪನ್ನಗಳು ಮತ್ತು ಲೋಹದ ಕಲಾಕೃತಿಗಳು ಸೇರಿ ವಿವಿಧ ಬಗೆಯ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಮೇಳಕ್ಕೆ ಆಗಮಿಸಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕೈಜೋಡಿಸುವಂತೆ ಆಯೋಜಕರು ಕೋರಿದ್ದಾರೆ.