ಹನೂರು ತಾಲೂಕು ತೊಮಿಯಾರ್‌ಪಾಳ್ಯದಲ್ಲಿ ಸಿರಿಧಾನ್ಯಗಳ ಬೆಳೆಗಾರರಿಗೆ ಆಯೋಜಿಸಿದ್ದ ತರಬೇತಿಯಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಯಿತು. ಡಾ.ಸುನೀಲ್, ದೀಪಾ, ನಾಗೇಂದ್ರ, ಮಹೇಶ್, ಧನಪಾಲ್ ಇತರರಿದ್ದರು.  
ರಾಜ್ಯ

ಸಿರಿಧಾನ್ಯ ಬೆಳೆಯಲು ರೈತರಿಗೆ ತಿಳಿವಳಿಕೆ

ಹನೂರು: ತಾಲೂಕಿನ ತೊಮಿಯಾರ್‌ಪಾಳ್ಯದಲ್ಲಿ ಶುಕ್ರವಾರ ಕೃಷಿ ವಿಶ್ವವಿದ್ಯಾಲಯ ಮಂಡ್ಯ, ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ ಹಾಗೂ ದಿ ಆರ್ಗನೈಸೇಷನ್ ಫಾರ್ ದಿ ಡೆವಲಪ್‌ಮೆಂಟ್‌ನಿಂದ ಸಿರಿಧಾನ್ಯಗಳ ಬೆಳೆಗಾರರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಈ ವೇಳೆ ಸಿರಿಧಾನ್ಯ ಸಂಶೋಧನಾ ಯೋಜನೆಯ ಬೇಸಾಯಶಾಸ್ತ್ರ ವಿಜ್ಞಾನಿ ಡಾ.ಸಿ.ಎಂ.ಸುನೀಲ್, ಸಿರಿಧಾನ್ಯಗಳ ಸುಧಾರಿತ ಬೇಸಾಯ ಪದ್ಧತಿ, ಬೀಜೋಪಚಾರ, ಸಮತೋಲನ ಪೋಷಕಾಂಶ ನಿರ್ವಹಣೆ, ತೇವಾಂಶ ಸಂರಕ್ಷಣೆ, ಸೂಕ್ಷ್ಮ ಜೀವಿಗಳ ಸಮೂಹ ಬಳಕೆ, ಅಂತರ ಬೆಳೆ ಪದ್ಧತಿಗಳ ಮಹತ್ವ, ಉತ್ಪಾದಕತೆ ಹೆಚ್ಚಳ, ಮಣ್ಣಿನ ಫಲವತ್ತತೆಯ ಸುಧಾರಣೆ, ಆದಾಯ ವೃದ್ಧಿ, ಪ್ರಸ್ತುತ ಮಳೆಯ ಕೊರೆತೆಗೆ ಅನುಗುಣವಾಗಿ ಬೆಳೆ ಯೋಜನೆ ಅಳವಡಿಸಿಕೊಳ್ಳುವುದು, ಬರ ಸಹಿಷ್ಣು ಬೆಳೆ, ತಳಿಗಳ ಆಯ್ಕೆ, ತೇವಾಂಶ ಸಂರಕ್ಷಣಾ ಕ್ರಮ ಹಾಗೂ ಪಯಾರ್ಯ ಬೆಳೆಗಳನ್ನು ಅಳವಡಿಸಿಕೊಳ್ಳುವ ವಿಧಾನ ತಿಳಿಸಿಕೊಟ್ಟರು.

ಚಾ.ನಗರ ಕೃಷಿ ವಿಜ್ಞಾನ ಕೇಂದ್ರದ ಆಹಾರ ಮತ್ತು ಪೌಷ್ಠಿಕ ತಜ್ಞೆ ದೀಪಾ, ಸಿರಿಧಾನ್ಯಗಳ ಪೌಷ್ಠಿಕಾಂಶ, ಆರೋಗ್ಯಕರ ಆಹಾರದಲ್ಲಿ ಇದರ ಮಹತ್ವ, ಮೌಲ್ಯವರ್ಧಿತ ಆಹಾರ ತಯಾರಿಸುವ ಕುರಿತು ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ನಾಗೇಂದ್ರ ಮಾತನಾಡಿ, ಅನಿಶ್ಚಿತ ಹವಾಮಾನ, ಅಲ್ಪ ಮಳೆ, ಬರ, ಅತಿವೃಷ್ಟಿ, ಗಾಳಿ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ಸಮಯಕ್ಕೆ ಸರಿಯಾಗಿ ಪ್ರತಿಯೊಬ್ಬರೂ ಬೆಳೆ ವಿಮೆ ನೋಂದಾಯಿಸಿಕೊಂಡು ಸರ್ಕಾರದಿಂದ ಸಿಗುವ ಸವಲತ್ತುಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಇದೇ ವೇಳೆ ರೈತರಿಗೆ ಬಿತ್ತನೆ ಬೀಜ ವಿತರಿಸಲಾಯಿತು. ಈ ಸಂದರ್ಭದಲ್ಲಿ ಒಡಿಪಿ ಸಂಸ್ಥೆ ಕಾರ್ಯಕರ್ತ ಮಹೇಶ್, ರೈತ ಉತ್ಪಾದಕರ ಸಮಿತಿ ಸದಸ್ಯ ಧನಪಾಲ್, ರೈತ ಮುಖಂಡರಾದ ವಿನ್ಸೆಂಟ್ ಸೂಸೈರಾಜ್ ಮಹೇಶ್, ಭಾಗ್ಯಮ್ಮ ಇತರರು ಇದ್ದರು.