Creating a job city is our resolve.
ಪಟ್ಟನಾಯಕನಹಳ್ಳಿ: ಅತಿವೇಗವಾಗಿ ಬೆಳೆಯುತ್ತಿರುವ ಶಿರಾವನ್ನು ಉದ್ಯೋಗನಗರಿಯಾಗಿ ಮಾಡಬೇಕೆಂಬ ಸಂಕಲ್ಪ ನಮ್ಮದಾಗಿದ್ದು, ನಗರದಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿ ಕಾಣಬೇಕು, ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕೆಂಬ ಉದ್ದೇಶದಿಂದ ಕೈಗಾರಿಕಾ ವಲಯಕ್ಕೆ ಭೂಮಿ ನೀಡಲಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕು ಪಟ್ಟನಾಯಕನಹಳ್ಳಿಯಲ್ಲಿ ಶನಿವಾರ ಶಾಯಿ ಎಕ್ಸ್ಪೋರ್ಟ್ ಕಂಪನಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಉತ್ತಮ ಶಿಕ್ಷಣ ಒದಗಿಸಿ ಯುವ ಜನತೆಗೆ ಉದ್ಯೋಗ ಒದಗಿಸಲು ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲಾಗಿದ್ದು, ಉದ್ಯೋಗ ಆಧಾರಿತ ಶಿಕ್ಷಣವನ್ನು ಒದಗಿಸಲಾಗುತ್ತಿದೆ ಎಂದರು.
ಶಿರಾದಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ 1300 ಎಕರೆ ಭೂಮಿ ನೀಡಲಾಗಿದ್ದು, ಕೈಗಾರಿಕೆಗಳು ಆರಂಭವಾದಲ್ಲಿ ಇಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿ ಕೈಗಾರಿಕಾ ಕಾಯ್ದೆ ಜಾರಿಗೊಳಿಸಿರುವುದರಿಂದಾಗಿ ಕೈಗಾರಿಕೆಗಳಿಂದ ಬರುವ ಲಾಭಾಂಶದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಶಾಯಿ ಎಕ್ಸ್ಪೋರ್ಟ್ ಕಂಪನಿಯಿಂದ ಶಾಲೆಗೆ 1 ಕೋಟಿ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣ ಮಾಡಿರುವುದು ಸಂತಸ ತಂದಿದೆ ಎಂದರು.
ಶಾಯಿ ಎಕ್ಸ್ಪೋರ್ಟ್ ಕಂಪನಿಯ ಅರ್ಚನಾ ಮಾತನಾಡಿ, ದೇಶದ ಶಕ್ತಿಯೇ ಶಿಕ್ಷಣ, ಈ ನಿಟ್ಟಿನಲ್ಲಿ ನಾವು ಶೈಕ್ಷಣಿಕ ಸೌಲಭ್ಯ ಕಲ್ಪಿಸಬೇಕೆಂಬ ಗುರಿಯಿಂದ ಕಂಪನಿಯ ಲಾಭಾಂಶದಲ್ಲಿ ಶೈಕ್ಷಣಿಕ ಸೇವೆ ನೀಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನಿಷ್ಠೆ, ಪ್ರಾಮಾಣಿಕತೆಯಿಂದ ವಿದ್ಯೆ ಕಲಿತರೆ ಯಶಸ್ಸು ಕಾಣಬಹುದು ಎಂದರು.
ಸೂಡ ಅಧ್ಯಕ್ಷ ಪಿ.ಆರ್.ಮಂಜುನಾಥ್, ತಾಪಂ ಇಒ ಆರ್.ಹರೀಶ್, ಬಿಇಒ ಕೃಷ್ಣಪ್ಪ, ನಾದೂರು ಗ್ರಾಪಂ ಮಾಜಿ ಅಧ್ಯಕ್ಷೆ ತುಳಸಿ, ತಾಪಂ ಮಾಜಿ ಸದಸ್ಯ ಕೆ.ಎಂ.ಶ್ರೀನಿವಾಸ, ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಗಂಗಾಧರ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ನಾಗೇಶ್, ಮುಖ್ಯಶಿಕ್ಷಕಿ ಮಂಜುಳಾ, ನಿವೃತ್ತ ಶಿಕ್ಷಕ ಓಂಕಾರಪ್ಪ, ಶಾಯಿ ಎಕ್ಸ್ಪೋರ್ಟ್ ಕಂಪನಿಯ ನಾಗಯ್ಯ, ಮನು, ಧನಂಜಯ, ಬಿಆರ್ಸಿ ಭೋಗೆಂದ್ರನಾಯ್ಕ, ಶ್ರೀಧರ್, ಭೂತರಾಜ ಇತರರಿದ್ದರು.
ಶಿರಾ ತಾಲೂಕು ಪಟ್ಟನಾಯಕನಹಳ್ಳಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಶಾಯಿ ಎಕ್ಸ್ಪೋರ್ಟ್ ಕಂಪನಿಯಿಂದ ನಿರ್ಮಿಸಿರುವ ನೂತನ ಕೊಠಡಿಗಳನ್ನು ಶಾಸಕ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. ಸೂಡ ಅಧ್ಯಕ್ಷ ಪಿ.ಆರ್.ಮಂಜುನಾಥ್, ತಾಪಂ ಇಒ ಆರ್.ಹರೀಶ್, ಬಿಇಒ ಕೃಷ್ಣಪ್ಪ, ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಗಂಗಾಧರ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ್, ಮುಖ್ಯಶಿಕ್ಷಕಿ ಮಂಜುಳಾ ಇತರರಿದ್ದರು.