High court 
ರಾಜ್ಯ

ಹೋಂಸ್ಟೇ ನಿಯಂತ್ರಣಕ್ಕೆ ಮಾರ್ಗಸೂಚಿ ರಚಿಸಿ| High court

ಬೆಂಗಳೂರು: ರಾಜ್ಯದಲ್ಲಿ ಹೋಂಸ್ಟೇಗಳ ಸ್ಥಾಪನೆ, ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಸಮಗ್ರ ಮಾರ್ಗಸೂಚಿ ರೂಪಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಹೈಕೋರ್ಟ್​ ಸೂಚನೆ ನೀಡಿದೆ. 
ಹೋಂಸ್ಟೇ ಪರವಾನಗಿ ರದ್ದುಪಡಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ಪ್ರಶ್ನಿಸಿ ಕೊಡಗಿನ ಹೋಂಸ್ಟೇ ಮಾಲೀಕರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ಪೀಠವು ಈ ನಿರ್ದೇಶನ ನೀಡಿದೆ. ಅರ್ಜಿದಾರರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಕಾಯ್ದೆ ಅಡಿ ನಿಗದಿಪಡಿಸಲಾದ ಕಡ್ಡಾಯ ಪ್ರಕ್ರಿಯೆ ಪಾಲಿಸದೆ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಪೀಠ, ಕಾನೂನು ಪಾಲಿಸಿ ಹೊಸದಾಗಿ ಕ್ರಮ ಕೈಗೊಳ್ಳಲು ಮುಕ್ತ ಅವಕಾಶ ನೀಡಿದೆ.

ಮಾರ್ಗಸೂಚಿಯಲ್ಲೇನಿರಬೇಕು?:

ಸೂಕ್ತ ಅಗ್ನಿಶಾಮಕ ಉಪಕರಣಗಳು, ತುರ್ತು ನಿರ್ಗಮನ ಮಾರ್ಗಗಳು, ನಿಯಮಿತ ಪರಿಶೀಲನೆ, ಅಡುಗೆ ಕೊಠಡಿಗಳ ನೈರ್ಮಲ್ಯ, ಗುಣಮಟ್ಟವನ್ನು ಹೊಂದಿರಬೇಕು. ಪ್ರವಾಸಿಗರ ನಿಖರ ದಾಖಲೆಗಳನ್ನು ನಿರ್ವಹಿಸಬೇಕು. ಗುರುತಿನ ಚೀಟಿಗಳ ಪರಿಶೀಲನೆ ಮಾಡುವುದು ಮತ್ತು ಕಾನೂನು ಸಂಸ್ಥೆಗಳಿಗೆ ಸಹಕಾರ, ದರ ನಿಗದಿ, ಬುಕಿಂಗ್​ ರದ್ದತಿ ನೀತಿ, ಸೌಲಭ್ಯಗಳು, ಮರುಪಾವತಿ, ಗ್ರಾಹಕರ ದೂರುಗಳ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ಇರಬೇಕು. ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ಒಳಚರಂಡಿ ನಿರ್ವಹಣೆ ಮತ್ತು ಪರಿಸರ ಸುಸ್ಥಿರತೆಗೆ ಸಂಬಂಧಿಸಿದಂತೆ ಮಾನದಂಡಗಳನ್ನು ಮಾರ್ಗಸೂಚಿಯಲ್ಲಿ ಒಳಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಗೆ ನ್ಯಾಯಾಲಯ ಸಲಹೆ ನೀಡಿದೆ.