ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ 7 ಸಾವು 
ರಾಜ್ಯ

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗಿಲ್ಲ ಕಡಿವಾಣ

ರವಿ ನಾಯಕ್

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಸುತ್ತಲು ಮುತ್ತಲು ಹೆಚ್ಚಿದ ಗಣಿಗಾರಿಕೆ
  • 3 ವರ್ಷದಲ್ಲಿ 25.59 ಕೋಟಿ ರೂ. ಮಾತ್ರ ದಂಡ
  • ಪ್ರಭಾವಿಗಳಿಂದಲೇ ಕ್ರಷರ್ ದಂಧೆ
  • ರಾಜಸ್ವ ಸಂಗ್ರಹ ಪ್ರಮಾಣ ಭಾರೀ ಇಳಿಕೆ

ರವಿ ನಾಯಕ್ , ಬೆಂಗಳೂರು

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಜಾಲ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಸರ್ಕಾರದ ಆದಾಯಕ್ಕೆ ಭಾರೀ ನಷ್ಟ ಉಂಟುಮಾಡುವುದರ ಜತೆಗೆ ಅಮಾಯಕ ಕಾರ್ಮಿಕರು ಬಲಿಯಲಾಗುತ್ತಿದ್ದಾರೆ. ಹೊರ ರಾಜ್ಯಗಳಿಂದ ಕೂಲಿ ಅರಸಿ ಬರುವರು ಹಾಗೂ ಸ್ಥಳೀಯ ಕಾರ್ಮಿಕರು ಸುರಕ್ಷತಾ ಕ್ರಮಗಳಿಲ್ಲದ ಅಕ್ರಮ ಕ್ವಾರಿಗಳಲ್ಲಿ ಕೆಲಸ ಮಾಡಿ ಪ್ರಾಣ ಕಳೆದುಕೊಳ್ಳುತ್ತಿರುವುದು ಪದೇ ಪದೇ ನಡೆಯುತ್ತಿದ್ದರೂ, ನಿಯಂತ್ರಣ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಲಕ್ಷ್ಯ ವಹಿಸಿದೆ.
ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ 2,367 ಅಕ್ರಮ ಗಣಿಗಾರಿಕೆ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಇಷ್ಟೊಂದು ಪ್ರಕರಣಗಳು ದಾಖಲಾಗಿದ್ದರೂ ಕೇವಲ 25.59 ಕೋಟಿ ರೂ. ದಂಡ ಮಾತ್ರ ಸಂಗ್ರಹವಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 
ಇದೇ ಅವಧಿಯಲ್ಲಿ 568 ಅಕ್ರಮ ಗಣಿಗಾರಿಕೆದಾರರ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೂ, ಹೆಚ್ಚಿನ ಪ್ರಕರಣಗಳಲ್ಲಿ ದಂಡದ ಪ್ರಮಾಣ ಅತ್ಯಂತ ಕಡಿಮೆಯಾಗಿರುವುದು ಅಕ್ರಮ ಗಣಿಗಾರಿಕೆಗೆ ಉತ್ತೇಜನ ನೀಡುತ್ತಿರುವ ಆರೋಪ ಕೇಳಿಬರುತ್ತಿದೆ.
ಪ್ರಭಾವಿಗಳ ಕ್ರಷರ್:
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿರುವ ಕ್ವಾರಿಗಳಿಗಿಂತ ಅಕ್ರಮವಾಗಿ ನಡೆಯುತ್ತಿರುವ ಕ್ವಾರಿಗಳ ಸಂಖ್ಯೆ ಹೆಚ್ಚುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಗಣಿ ಇಲಾಖೆ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದಿದ್ದಾರೆ ಎಂಬ ಆರೋಪವಿದೆ. 
ಅಕ್ರಮ ಕಲ್ಲು, ಜಲ್ಲಿ, ಮರಳು ಮತ್ತು ಖನಿಜಗಳ ಗಣಿಗಾರಿಕೆಯಿಂದ ಸರ್ಕಾರದ ರಾಜಸ್ವಕ್ಕೆ ವಾರ್ಷಿಕ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಕ್ವಾರಿಗಳಿಗೆ ಪ್ರಭಾವಿ ರಾಜಕಾರಣಿಗಳು ಪರೋಕ್ಷವಾಗಿ ರಕ್ಷಣೆಗೆ ನಿಂತಿದ್ದಾರೆ. ಕಾರ್ಮಿಕರ ಸಾವು ನೂವುಗಳು ಕೇವಲ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳಿಗೆ ಸೀಮಿತವಾಗುತ್ತಿವೆ. ಕಳೆದ ನಾಲ್ಕೈದು ವರ್ಷಗಳಿಂದ ಕಲ್ಲಿನ ಕ್ವಾರಿಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಕ್ವಾರಿ ಮಾಲೀಕರಿಗೊಬ್ಬರಿಗೂ ಶಿಕ್ಷೆಯಾಗಿಲ್ಲ. ಶಿಕ್ಷೆಯಾಗಿದ್ದರು ಟಿಪ್ಪರ, ಹಿಟಾಚಿ ಚಾಲಕರ ವಿರುದ್ಧ ಆಗಿವೆ. 
ಟಾಸ್ಕ್ ಫೋರ್ಸ್ ಸಮಿತಿ ನಿಷ್ಕ್ರಿಯ
ಅಕ್ರಮ ಗಣಿಗಾರಿಕೆ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಮಟ್ಟದಲ್ಲಿ ರಚಿಸಲಾಗಿದ್ದ ಟಾಸ್ಕ್ ಫೋರ್ಸ್ ಸಮಿತಿ ಬಹುತೇಕ ನಿಷ್ಕ್ರಿಯಗೊಂಡಿದೆ. ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ, ಸಾರಿಗೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯಾಚರಣೆ ನಡೆಸಬೇಕಿದ್ದರೂ, ಅನೇಕ ಜಿಲ್ಲೆಗಳಲ್ಲಿ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ. ಪರಿಣಾಮವಾಗಿ ಅಕ್ರಮ ಗಣಿಗಾರಿಕೆ ನಡೆಸುವವರಿಗೆ ಭಯವಿಲ್ಲದ ವಾತಾವರಣ ನಿರ್ಮಾಣವಾಗಿದೆ.

ಸುರಕ್ಷತಾ ನಿಯಮಗಳ ಪಾಲನೆ ಇಲ್ಲ

ಅಕ್ರಮ ಕ್ವಾರಿಗಳಲ್ಲಿ ಸ್ಫೋಟಕ ಬಳಕೆ, ಕಲ್ಲು ಕತ್ತರಿಸುವುದು ಹಾಗೂ ಗಣಿಗಾರಿಕೆ ಕಾರ್ಯಗಳು ಯಾವುದೇ ಸುರಕ್ಷತಾ ಮಾನದಂಡಗಳಿಲ್ಲದೆ ನಡೆಯುತ್ತಿವೆ. ಕಾರ್ಮಿಕರಿಗೆ ಹೆಲ್ಮೆಟ್, ಸುರಕ್ಷತಾ ಬೆಲ್ಟ್, ಧೂಳು ನಿರೋಧಕ ಮಾಸ್ಕ್ ಸೇರಿ ಮೂಲಭೂತ ಸುರಕ್ಷತಾ ಉಪಕರಣಗಳನ್ನೂ ಒದಗಿಸಲಾಗುತ್ತಿಲ್ಲ. ಪರಿಣಾಮವಾಗಿ ಕಲ್ಲು ಕುಸಿತ, ಸ್ಫೋಟ ಹಾಗೂ ಯಂತ್ರೋಪಕರಣಗಳ ಅವಘಡಗಳಲ್ಲಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ದಂಡಕ್ಕಿಂತ ಲಾಭವೇ ಹೆಚ್ಚು

ಅಕ್ರಮ ಗಣಿಗಾರಿಕೆಯಿಂದ ಗಳಿಸುವ ಲಾಭಕ್ಕೆ ಹೋಲಿಸಿದರೆ ವಿಧಿಸಲಾಗುತ್ತಿರುವ ದಂಡದ ಮೊತ್ತ ತೀರಾ ಕಡಿಮೆಯಾಗಿದೆ. ಇದರಿಂದ ದಂಡ ಕಟ್ಟಿದರೂ ಅಕ್ರಮ ಗಣಿಗಾರಿಕೆಯನ್ನು ಮುಂದುವರಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಕೇವಲ ಪ್ರಕರಣ ದಾಖಲಿಸುವುದಕ್ಕಿಂತ ವಾಹನ, ಯಂತ್ರೋಪಕರಣ ಜಪ್ತಿ, ಪರವಾನಗಿ ರದ್ದು, ಪುನರಾವರ್ತಿತ ಅಪರಾಧಿಗಳ ವಿರುದ್ಧ ಕಠಿಣ ಕ್ರಿಮಿನಲ್ ಕ್ರಮ ಜರುಗಿಸುವ ಅಗತ್ಯವಿದೆ. ಆದರೆ, ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ. 
ಜಿಲೆಟಿನ್, ಡಿಟೋನೆಟರ್ ಪತ್ತೆ 
ಕಳೆದ ಮೇ 10 ರಂದು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಆಗಮನದ ಕಾನ್ವೆ ರಸ್ತೆಯಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಅದರ ಬೆನ್ನಲ್ಲೇ ಜೂನ್ 9 ರಂದು ನಗರದ ಆವಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 231 ಜೆಲಿಟೆನ್ ಕಡ್ಡಿ, ಹಾಗೂ 50 ಡಿಟೋನೆಟರ್‌ಗಳು ಪತ್ತೆಯಾಗಿವೆ. ನಗರದ ಕೆ.ಆರ್.ಮಾರುಕಟ್ಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ 6 ಜಿಲೆಟಿನ್ ಕಡ್ಡಿಗಳು ಹಾಗೂ ಸ್ಫೋಟಕ ವಸ್ತುಗಳ ಬ್ಯಾಗ್‌ವೊಂದು ಪತ್ತೆಯಾಗಿತ್ತು. ಹೀಗೆ ನಿಯಮ ಬಾಹಿರವಾಗಿ ಅಪಾಯಕಾರಿ ಜಿಲೆಟಿನ್ ಕಡ್ಡಿಗಳನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಡಿಲರ್ಸ್‌ಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಕಮಿಷನ್ ಆಧಾರದ ಮೇಲೆ ಈ ಅಕ್ರಮ ವ್ಯವಹಾರ ರಾಜಾರೋಷವಾಗಿ ನಡೆಯುತ್ತಿದೆ. ಬೆಂಗಳೂರು ನಗರಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿನ ನೂರಾರು ಕಲ್ಲಿನ ಕ್ವಾರಿಗಳಿಗೆ ಏಜೆಂಟರ್ ಹಾಗೂ ಡಿಲರ್ಸ್‌ಗಳು ಕ್ವಾರಿ ಮಾಲೀಕರಿಗೆ ಪೂರೈಕೆ ಮಾಡಲಾಗುತ್ತಿದೆ.