Crackdown on bike 
ರಾಜ್ಯ

ಬೈಕ್‌ಟ್ಯಾಕ್ಸಿ ಚಾಲಕರ ವಿರುದ್ಧ ಕಾರ್ಯಾಚರಣೆ

ಪ್ರಮುಖ ಮುಖ್ಯಾಂಶಗಳು

  • 300ಕ್ಕೂ ಹೆಚ್ಚು ಬೈಕ್‌ಗಳ ವಶಕ್ಕೆ ಪಡೆದ ಆರ್‌ಟಿಒ

ಬೆಂಗಳೂರು:

ಸಾರಿಗೆ ಇಲಾಖೆ ನಿಯಮ ಉಲ್ಲಂಸಿ ಬೈಕ್ ಟ್ಯಾಕ್ಸಿ ನಡೆಸುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಆರ್‌ಟಿಒ ಅಧಿಕಾರಿಗಳ 300ಕ್ಕೂ ಹೆಚ್ಚು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಪಶ್ಚಿಮ, ರಾಜಾಜಿನಗರ, ಉತ್ತರ ವಿಭಾಗ ಸೇರಿ ವಿವಿಧ ಪ್ರಾದೇಶಿಕ ಕಚೇರಿ ಅಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ತಪಾಸಣೆ ನಡೆಸಿದರು. ವೈಟ್‌ಬೋರ್ಡ್ ಬೈಕ್‌ಗಳನ್ನು ಬಾಡಿಗೆ ಸಂಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು. ಖಾಸಗಿ ಕಂಪನಿ ಆ್ಯಪ್ ಮೂಲಕ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಈ ಬಗ್ಗೆ ಕಚೇರಿಗೆ ಹಲವು ದೂರುಗಳು ಬರುತ್ತಿದ್ದ ಪರಿಣಾಮ ಬಾಡಿಗಾಗಿ ಬಳಕೆ ಮಾಡುತ್ತಿದ್ದ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬೈಕ್ ಟ್ಯಾಕ್ಸಿ, ರ‌್ಯಾಪಿಡೋ ಹೆಸರಿನಲ್ಲಿ ನಡೆಸುತ್ತಿದ್ದವರ ವಿರುದ್ಧ ಈ ಕಾರ್ಯಾಚರಣೆ ನಿರಂತರವಾಗಿ ಮುಂದುವರೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದಲ್ಲಿ ಸಾರ್ವಜನಿಕರ ಸಾರಿಗೆ ವಾಹನ, ಕಾರುಗಳಿಗಿಂತ ಹೆಚ್ಚಾಗಿ ದ್ವಿಚಕ್ರವಾಹನಗಳ ಸಂಖ್ಯೆ ಹೆಚ್ಚಿದೆ. ರಾಜ್ಯ ಸೇರಿ ವಿವಿಧ ಕಡೆಗಳಿಂದ ಬಂದವರು ನಗರದಲ್ಲಿ ಬೈಕ್ ಟ್ಯಾಕ್ಸಿಗಳನ್ನು ಓಡಿಸುತ್ತಿದ್ದಾರೆ. ಇದರಿಂದ ಆಟೋ ರೀಕ್ಷ, ಟ್ಯಾಕ್ಸಿ ಚಾಲಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಹಲವು ವರ್ಷಗಳಿಂದ ಬೈಕ್‌ಟ್ಯಾಕ್ಸಿದಾರರ ವಿರುದ್ದ ಆರೋಪಗಳು ಕೇಳಿ ಬರುತ್ತಿದ್ದವು. ಎಚ್ಚೆತ್ತ ಅಧಿಕಾರಿಗಳು ವೈಟ್‌ಬೋರ್ಡ್ ಬೈಕ್‌ಗಳನ್ನು ಬಾಡಿಗಾಗಿ ಬಳಕೆ ಮಾಡುತ್ತಿರುವವರ ವಿರುದ್ಧ ಸಮರ ಸಾರಿದ್ದಾರೆ.

ಬೈಕ್ ಟ್ಯಾಕ್ಸಿ ಚಾಲಕರ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಆದಿನಾರಾಯಣ ಮಾತನಾಡಿ, ನಗರದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸೂಕ್ತ ನಿಯಮಾವಳಿ ರೂಪಿಸಿ, ಕಾನೂನುಬದ್ಧಗೊಳಿಸುವಂತೆ ನಾವು ಅನೇಕ ಬಾರಿ ಆರ್‌ಟಿಒ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗ ಆರ್‌ಟಿಒ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಅಧಿಕಾರಿಗಳ ಕಾರ್ಯಾಚರಣೆ, ಅವರು ದಂಡ ವಿಧಿಸುತ್ತಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕೆಲ ಆಟೋ ಚಾಲಕರು ಬೈಕ್ ಟ್ಯಾಕ್ಸಿ ಚಾಲಕರನ್ನು ತಡೆದು ಹಲ್ಲೆ ಮಾಡುವುದು ಸರಿಯಲ್ಲ. ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳಿಗೆ ಎಲ್ಲೋ ಬೋರ್ಡ್‌ಗೆ ಅನುಮತಿ ನೀಡಲಿ ಎಂದು ಮನವಿ ಮಾಡಿದ್ದಾರೆ.