ಹೋಟೆಲ್ ಉದ್ಯಮ ಉಳಿಸಬೇಕು ಎಂದು ಒತ್ತಾಯಿಸಿ ಸಿಪಿಐ(ಎಂ) ಕಾರ್ಯಕರ್ತರು ಸಿದ್ದಾಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಿ.ಆರ್. ಭರತ್, ಎಚ್.ಬಿ. ರಮೇಶ್, ಎಸ್. ಬೈಜು, ಪದ್ಮಿನಿ ಶ್ರೀಧರ್ ಇತರರಿದ್ದರು.
ಸಿದ್ದಾಪುರ: ಇಸ್ರೇಲ್-ಇರಾನ್ ಯುದ್ಧ ಸಂಘರ್ಷದ ಪರಿಣಾಮ ದೇಶದಲ್ಲಿ ಉಂಟಾಗಿರುವ ಅನಿಲ ಅಭಾವದಿಂದ ಹೋಟೆಲ್ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆ, ತಕ್ಷಣ ಗ್ಯಾಸ್ ಪೂರೈಕೆ ಕಲ್ಪಿಸಿ ಉದ್ಯಮವನ್ನು ಉಳಿಸಬೇಕು ಎಂದು ಒತ್ತಾಯಿಸಿ ಸಿಪಿಐ(ಎಂ) ಕಾರ್ಯಕರ್ತರು ಸಿದ್ದಾಪುರ ಪಟ್ಟಣದಲ್ಲಿ ಭಾನುವಾರ ಸಂಜೆ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಪಿ.ಆರ್. ಭರತ್, ಐಟಿ-ಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರು ಹೋಟೆಲ್ ಉದ್ಯಮದ ಮೇಲೆ ಅವಲಂಬಿತರಾಗಿದ್ದು, ಹೋಟೆಲ್‌ಗಳು ಬಂದ್ ಆಗಿರುವುದರಿಂದ ಜನರು ಜೀವನೋಪಾಯಕ್ಕಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಹೋಟೆಲ್‌ಗಳಿಗೆ ಅಗತ್ಯ ಅನಿಲವನ್ನು ಪೂರೈಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಮೇಶ್ ಮಾತನಾಡಿ, ಯುದ್ಧದಿಂದ ಜಾಗತಿಕ ಮಟ್ಟದಲ್ಲಿ ಡೀಸೆಲ್, ಪೆಟ್ರೋಲ್ ಮತ್ತು ಅನಿಲ ಅಭಾವಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶಾಂತಿ ಮಾತುಕತೆಗಳಿಗೆ ವೇದಿಕೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಜತೆಗೆ ಗೃಹ ಬಳಕೆಯ ಗ್ಯಾಸ್ ಬೆಲೆ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಸ್. ಬೈಜು, ಪದ್ಮಿನಿ ಶ್ರೀಧರ್, ಸಿದ್ದಾಪುರ ನಗರ ಸಮಿತಿ ಕಾರ್ಯದರ್ಶಿ ಸಾಲಿ ಪೌಲೋಸ್, ಸಂಚಲನ ಸಮಿತಿ ಸದಸ್ಯರಾದ ಸಿ.ಯು. ಮುಸ್ತಫ, ಸುಬ್ರು ಹಾಗೂ ಪಕ್ಷದ ಕಾರ್ಯಕರ್ತರಾದ ಪುಷ್ಪ, ಗೀತಾ, ಇ.ಎಂ. ಉಮರ್, ಅಬ್ದುಲ್ ರೆಹಮಾನ್ ಸೇರಿದಂತೆ ಇತರರು ಭಾಗವಹಿಸಿದ್ದರು.