ಅರಸೀಕೆರೆ ಗ್ರಾಮಾಂತರ ತಾಲೂಕಿನ ಕಸ್ತೂರಿಬಾ ಗೋಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್ ಮಾತನಾಡಿದರು. ಗಂಗಾಧರ್, ಬಸವರಾಜ್, ಶಿವಕುಮಾರ್, ಪ್ರಮೋದ್, ಮುರಳಿಧರ್, ಜಯರಾಮ್, ಪಂಕಜ್ ಪಟೇಲ್ ಇತರರಿದ್ದರು. 
ರಾಜ್ಯ

ಗೋವುಗಳು ಮಣ್ಣಿನ ಸಂಸ್ಕೃತಿಯ ಅವಿಭಾಜ್ಯ ಅಂಗ

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಗೀಜಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಸ್ತೂರಿಬಾ ಗೋಶಾಲೆಯಲ್ಲಿ ಹತ್ತನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಗೋಪೂಜೆ ನೆರವೇರಿಸುವ ಮೂಲಕ ಸೋಮವಾರ ಆಚರಿಸಲಾಯಿತು.
ಅನಂತ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಅನಂತ್‌ಕುಮಾರ್ ಮಾತನಾಡಿ, ನಮ್ಮ ಮನೆಗಳಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ಸನಾತನ ಧರ್ಮದ ಸಂಪ್ರದಾಯದಂತೆ ಗೋವುಗಳಿಗೆ ಗೋಗ್ರಾಸ ನೀಡಿ ಪೂಜೆ ಸಲ್ಲಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಗೋವುಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಶುಭ ಸಮಾರಂಭಗಳ ಸಂದರ್ಭದಲ್ಲಿ ಅನಗತ್ಯ ಖರ್ಚು ಮಾಡುವ ಬದಲು ಗೋಶಾಲೆಗಳಿಗೆ ನೆರವು ನೀಡುವ ಮೂಲಕ ಗೋ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗೋಶಾಲೆಗೆ ಅವಿರತವಾಗಿ ಸೇವೆ ಸಲ್ಲಿಸಿದ ಡಾ. ಬಸವರಾಜ ರಾಮಪ್ಪ ಬಾಳಪ್ಪನವರ್, ಡಾ. ಮಂಜುನಾಥ್ ಹಾಗೂ ಡಾ. ಶಿವಕುಮಾರ್ ಅವರಿಗೆ ಕಸ್ತೂರಿಬಾ ಗೋ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಶನ ಉಪ ಪೊಲೀಸ್ ಅಧೀಕ್ಷಕ ಗಂಗಾಧರಪ್ಪ, ಕುಮಾರಿ ಲೇಖನ್ ಜೈನ್ ಹಾಗೂ ದೀಪಕ್ ರಾಜ್ ಅವರಿಗೆ ಕಸ್ತೂರಿಬಾ ಗೋ ರಕ್ಷಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಜನ್ಮಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳಿಗಾಗಿ ಶ್ರೀಕೃಷ್ಣ-ರಾಧೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಶ್ರೀಕೃಷ್ಣ ಹಾಗೂ ರಾಧೆಯ ವೇಷದಲ್ಲಿ ಕಂಗೊಳಿಸಿದರು. ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ಹಾಗೂ ವಿಶೇಷ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಸ್ತೂರಿಬಾ ಗೋಶಾಲೆ ಅಧ್ಯಕ್ಷ ಜಯರಾಮ್, ಭಾರತೀಯ ಗೋ ಪರಿವಾರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಂಕಜ್ ಪಾಟೇಲ್, ಮುರಳಿಧರ್, ಪಾರಸ್, ರಾಜಶೇಖರ್, ಗೀತಾ ಉಮೇಶ್, ಕುಸುಮ ಸೇರಿದಂತೆ ಗೋಪ್ರೇಮಿಗಳು, ಸಾರ್ವಜನಿಕರು, ಮಕ್ಕಳು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.