ರಬಕವಿ ಮಾರುಕಟ್ಟೆಯ ಮುಖ್ಯ ಚರಂಡಿಯ ತಗ್ಗು ಪ್ರದೇಶಕ್ಕೆ ಬಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸುತ್ತಿರುವುದು.
- ಹತ್ತು ಅಡಿ ಆಳದ ತಗ್ಗು ಪ್ರದೇಶ
- ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ
ರಬಕವಿ: ನಗರದ ಮಾರುಕಟ್ಟೆಯ ಮುಖ್ಯ ಚರಂಡಿಯ ಸಮೀಪದ ಸುಮಾರು ಹತ್ತು ಅಡಿ ಆಳದ ತಗ್ಗು ಪ್ರದೇಶಕ್ಕೆ ಭಾನುವಾರ ಹಸುವೊಂದು ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ಹಸು ಚರಂಡಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿ, ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಎಂ.ಎಸ್. ಹೂಗಾರ, ಟಿ.ವೈ. ಭಂಡಾರಿ, ಎ.ಐ. ಹಣಮರಡ್ಡಿ, ವಿ.ಐ. ಇಮನ್ನವರ ಹಾಗೂ ಕೆ.ಆರ್. ದೊಡ್ಡಮನಿ ಪಾಲ್ಗೊಂಡಿದ್ದರು.
ಮಾರುಕಟ್ಟೆಯ ಮುಖ್ಯ ಚರಂಡಿಯ ಬಳಿ ಆಳವಾದ ತಗ್ಗು ಪ್ರದೇಶವಿದ್ದು, ಸಮರ್ಪಕ ಸುರಕ್ಷತಾ ತಡೆಗೋಡೆ ಅಥವಾ ಎಚ್ಚರಿಕೆ ವ್ಯವಸ್ಥೆ ಇಲ್ಲದಿರುವುದರಿಂದ ಇಂತಹ ಅವಘಡಗಳು ಮರುಕಳಿಸುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಚರಂಡಿಯ ಸುತ್ತ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕನ್ನಡ ಸಂಘದ ಅಧ್ಯಕ್ಷ ಚಿದಾನಂದ ಸೊಲ್ಲಾಪುರ ಸಾರ್ವಜನಿಕರ ಪರವಾಗಿ ಒತ್ತಾಯಿಸಿದ್ದಾರೆ.