ಕಾವೇರಿ ನದಿಗೆ ಕಸದ ಮೂಟೆ ಎಸೆದ ಜೋಡಿ
- ಕಾವೇರಿ ನದಿಗೆ ಕಸದ ಮೂಟೆ ಎಸೆದ ಜೋಡಿ
- ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಗರಂ
- ನದಿಗೆ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
Kaveri River Garbage Dumping: ಕಾವೇರಿ ನದಿಗೆ ಕಸ ಎಸೆದು ಪರಿಸರ ಹಾಳು ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.
ಈ ಘಟನೆ, ಕೊಡಗು ಜಿಲ್ಲೆಯ ಮೂರ್ನಾಡು ಪಟ್ಟಣದ ಕೊಣಂಗೇರಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ. ಸೇತುವೆ ಮೇಲೆ ಕಾರು ನಿಲ್ಲಿಸಿದ ವ್ಯಕ್ತಿಯೊಬ್ಬ ಮಹಿಳೆಯ ಜತೆ ಕೆಳಗಿಳಿದಿದ್ದಾನೆ. ಈ ವೇಳೆ ವ್ಯಕ್ತಿಯೊಬ್ಬ ದೊಡ್ಡ ಬಿಳಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು, ಅದರೊಳಗಿದ್ದ ಕಸವನ್ನು ಒಂದೊಂದಾಗಿ ತೆಗೆದು ಕಾವೇರಿ ನದಿಗೆ ಎಸೆಯುತ್ತಿರುವುದು ವಿಡಿಯೋದಲ್ಲಿ ಕಾಣಿಸಿದೆ.
ಅಷ್ಟೇ ಅಲ್ಲ, ಅಲ್ಲೇ ಇದ್ದ ನೋಡುತ್ತಿದ್ದರೂ ಸ್ಥಳೀಯರು ಕಸ ಎಸೆಯುವುದನ್ನು ಇಬ್ಬರೂ ನಿಲ್ಲಿಸಿಲ್ಲ. ಬಳಿಕ ಸ್ಥಳದಿಲ್ಲಿದ್ದವರು ಕಸ ಎಸೆಯುವುದನ್ನು ಮೊಬೈಲಗ್ನಲ್ಲಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ‘ಇದೇನಾ ಸಿವಿಕ್ ಸೆನ್ಸ್?’ ಅಂತ ಜನರು ಪ್ರಶ್ನೆ ಮಾಡಿದ್ದಾರೆ.
‘ಕಸದ ಬುಟ್ಟಿಗೆ ಹಾಕಲು ಏನಾಗಿತ್ತು?’
ಕಾವೇರಿ ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲೊಂದು. ಅಲ್ಲದೆ ಕಾವೇರಿಯನ್ನು ಜೀವನದಿ ಎಂದು ಪೂಜಿಸುವ ನಾಡು ನಮ್ಮದು. ನದಿ ಹಾಗೂ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ, ಕೆಲವರು ಬೇಕಾಬಿಟ್ಟಿ ಕಸ ಎಸೆಯುತ್ತಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸ್ವಚ್ಛ ಭಾರತವನ್ನು ನಿರೀಕ್ಷಿಸುವುದು ಹೇಗೆ?’
‘ಭಾರತ ಬೇರೆ ದೇಶಗಳಂತೆ ಕ್ಲೀನ್ ಆಗಬೇಕು ಅಂತ ಹೇಗೆ ನಿರೀಕ್ಷೆ ಮಾಡೋದು?’ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ‘ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ದಂಡ ಹಾಕಬೇಕು’ ಎಂದು ಒತ್ತಾಯಿಸಿದ್ದಾರೆ. ಇನ್ನೊಬ್ಬರು, ‘ಇದು ಕೇವಲ ಕಸ ಹಾಕುವುದಲ್ಲ, ನದಿಯನ್ನೇ ವಿಷ ಮಾಡುವ ಕೆಲಸ. ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಮಕ್ಕಳಿಗೆ ನಾವು ಏನು ಬಿಟ್ಟು ಹೋಗುತ್ತಿದ್ದೇವೆ?
ಇನ್ನೊಂದೆಡೆ, ‘ಪ್ರಕೃತಿ ಉಳಿಸಲು ಇನ್ನಷ್ಟು ಕಠಿಣ ಕಾನೂನು ಬೇಕು. ನಮ್ಮ ಮಕ್ಕಳಿಗೆ ನಾವು ಏನು ಬಿಟ್ಟು ಹೋಗುತ್ತಿದ್ದೇವೆ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇದೇ ವೇಳೆ, ‘ತಪ್ಪು ನಡೆಯುತ್ತಿರುವುದನ್ನು ನೋಡಿದಾಗ ವಿಡಿಯೋ ಮಾಡಿ ದೂರು ಕೊಡುವುದಕ್ಕಿಂತ ಮೊದಲು ಅದನ್ನು ತಡೆಯಲು ಪ್ರಯತ್ನ ಮಾಡಬೇಕು’ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ
ಘಟನೆ ವೈರಲ್ ಆದ ಬಳಿಕ ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ಕಸ ಎಸೆದ ವ್ಯಕ್ತಿಯನ್ನು ಗುರುತಿಸಿ ಠಾಣೆಗೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಆತನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಕಾವೇರಿಯಂತಹ ಪ್ರಮುಖ ನದಿಗೆ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಇದೀಗ ಜೋರಾಗಿದೆ.(ಏಜೆನ್ಸೀಸ್).