- ಕರ್ನಾಟಕ ಮೂಲದ ಸಾರ್ಟ್‌ಅಪ್ ಕಂಪನಿಯಾದ ನ್ಯೂರಾಲಿಕ್ಸ್ ಎಐ, ತಂತ್ರಜ್ಞಾನ ವಿನ್ಯಾಸ
- ಐಡೆಕ್ಸ್ ಅಡಿಟಿ 2.0 ಉಪಕ್ರಮ ಅಡಿ ವಿನ್ಯಾಸ ಅಭಿವೃದ್ಧಿ
- ರಕ್ಷಣಾ ಕಾರ್ಯಾಚರಣೆಗಳಿಗೆ ಅನುಕೂಲ
ಬೆಂಗಳೂರು:ಕರ್ನಾಟಕ ಮೂಲದ ಸಾರ್ಟ್‌ಅಪ್ ಕಂಪನಿಯಾದ ನ್ಯೂರಾಲಿಕ್ಸ್ ಎಐ, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ದೇಶದ ಮೊದಲ ಸ್ವದೇಶಿ ರಕ್ಷಣಾ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.
ಇದು ಭಾರತದ ಡೀಪ್‌ಟೆಕ್ ಕಂಪನಿಯಾಗಿದೆ. ಇಂಧನ, ಉತ್ಪಾದನೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸುಧಾರಿತ ಎಐ ಪರಿಹಾರ ಒದಗಿಸುತ್ತಿದೆ. ಸಂಕೀರ್ಣ ಕಾರ್ಯಾಚರಣೆ ಡೇಟಾವನ್ನು ನಿಖರವಾಗಿ ಪರಿವರ್ತಿಸಲಿದೆ. ಸಲಕರಣೆ ಕಾರ್ಯಕ್ಷಮತೆ ಅತ್ಯುತ್ತಮವಾಗಿಸಲು, ಕಾರ್ಯಾಚರಣೆ ವೆಚ್ಚ ತಗ್ಗಿಸಲು ಮತ್ತು ದಕ್ಷತೆ ಹೆಚ್ಚಿಸಲು ಕಂಪನಿ ತಂತ್ರಜ್ಞಾನ ಕಂಡುಹಿಡಿದಿದೆ.
ಇತ್ತೀಚಿಗಷ್ಟೇ ನಡೆದ ಚಾಣಕ್ಯ ರಕ್ಷಣಾ ಸಂವಾದದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ಮೊದಲ ಸಂಪೂರ್ಣ ಸ್ವದೇಶಿ ರಕ್ಷಣಾ ಎಐ-ಎ-ಸರ್ವಿಸ್‌ಗೆ(ಎಎಲ್‌ಎಎಎಸ್) ಚಾಲನೆ ನೀಡಿದರು. ರಕ್ಷಣಾ ಸಚಿವಾಲಯದ ಐಡೆಕ್ಸ್ ಅಡಿಟಿ 2.0 ಉಪಕ್ರಮ ಅಡಿ ನ್ಯೂರಾಲಿಕ್ಸ್ ಎಐ, ಭಾರತೀಯ ಸೇನೆಗಾಗಿ ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ, ದೇಶೀಯ ನಾವೀನ್ಯತೆ ಮೂಲಕ ಮುಂದಿನ ಪೀಳಿಗೆಯ ರಕ್ಷಣಾ ಸಾಮರ್ಥ್ಯ ನಿರ್ಮಿಸಲು ಅಡಿಪಾಯ ಸಿಕ್ಕಿದೆ.
ಸ್ವದೇಶಿ ದೊಡ್ಡ ಭಾಷಾ ಮಾದರಿ (ಎಲ್‌ಎಲ್‌ಎಂ) ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ತಂತ್ರಜ್ಞಾನ ವಿನ್ಯಾಸಗೊಳಿಸಲಾಗಿದೆ. ಕಮಾಂಡ್ ಬೆಂಬಲ, ಡಾಕ್ಯುಮೆಂಟ್ ಇಂಟೆಲಿಜೆನ್ಸ್, ಸ್ಪೀಚ್ ಇಂಟರ್‌ಫೇಸ್, ಟ್ರಾನ್ಸ್‌ಲೇಷನ್ ಇಂಜಿನ್, ಆಪರೇಷನಲ್ ಅನಾಲಿಟಿಕ್ಸ್, ವಿದೇಶಿ ಕ್ಲೌಡ್ ಸೇವೆ, ಇಂಟರ್ನೆಟ್ ಸಂಪರ್ಕ, ಡೇಟಾ ಸೇರಿ ಇತ್ಯಾದಿ ಅಪ್ಲಿಕೇಶನ್‌ಗೆ ಎಐ ತಂತ್ರಜ್ಞಾನ ನೆರವಾಗಲಿದೆ. ಇದು ಸಶಸ್ತ್ರ ಪಡೆಗಳಿಗೆ ಸ್ವಾವಲಂಬಿ, ಭವಿಷ್ಯಕ್ಕೆ ಸಿದ್ಧವಾದ ಡಿಜಿಟಲ್ ನಿರ್ಮಿಸಲು ಸಹಾಯವಾಗಲಿದೆ. ಕಾರ್ಯಾಚರಣೆಯ ಸಿದ್ಧತೆ ಮತ್ತು ವಿದೇಶಗಳ ತಂತ್ರಜ್ಞಾನ ಅವಲಂಬನೆ ಕಡಿಮೆ ಮಾಡಲಿದೆ.
ಸ್ವದೇಶಿ ರಕ್ಷಣಾ ಕೃತಕ ಬುದ್ಧಿಮತ್ತೆ ಅಭಿವೃದ್ಧಿಯಿಂದ ದೇಶದ ಮಿಲಿಟರಿಗೆ ಇನ್ನಷ್ಟು ಬಲ ಸಿಕ್ಕಿದೆ. ಆತ್ಮನಿರ್ಭಾರ್ ಭಾರತ ಮಹತ್ವಾಕಾಂಕ್ಷೆ ಪರಿಕಲ್ಪನೆಗೆ ಶಕ್ತಿ ಬಂದಿದೆ. ಹೊಸ ತಂತ್ರಜ್ಞಾನ ಸ್ಥಾಪಿಸಿದ್ದಕ್ಕೆ ನ್ಯೂರಾಲಿಕ್ಸ್ ಎಐ ಕಂಪನಿಗೆ ಕೃತಜ್ಞತೆ ಸಲ್ಲಿಸುವುದಾಗಿ ರಾಜನಾಥ್ ಸಿಂಗ್ ಹೇಳಿದರು.