Silver Kavach donated to Goddess Banashankari by MLA M. Krishnappa
- * 5 ಹುಂಡಿಗಳಿಂದ 80 ಲಕ್ಷ ರೂ. ಸಂಗ್ರಹ
- * ಮೊದಲ ಬಾರಿಗೆ ಇಲಾಖೆ ಸಿಬ್ಬಂದಿ, ಹೋಂಗಾರ್ಡ್ ಬಳಕೆ
ಬೆಂಗಳೂರು: ನಗರದ ಬನಶಂಕರಿ ದೇವಾಲಯದಲ್ಲಿ ಹುಂಡಿ ಎಣೆಕೆ ಕಾರ್ಯ ನಡೆದಿದ್ದು, ಐದು ಹುಂಡಿಗಳಿಂದ ₹80 ಲಕ್ಷಕ್ಕೂ ಅಧಿಕ ನಗದು, 110 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಇದೇ ಮೊದಲ ಬಾರಿಗೆ ಸಾರ್ವಜನಿಕರ ಬದಲು ಹೋಂಗಾರ್ಡ್ ಹಾಗೂ ಸರ್ಕಾರಿ ಸಿಬ್ಬಂದಿ ಮೂಲಕ ಬಿಗಿ ಭದ್ರತೆಯೊಂದಿಗೆ ಕಾಣಿಕೆ ಎಣಿಕೆ ಮಾಡಲಾಗಿದೆ.
ಆಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ನಂತರ ಕರ್ನಾಟಕದ ದೇವಾಲಯಗಳ ಹುಂಡಿಗಳಿಗೆ ವಿಶೇಷ ಭದ್ರತೆ ಒದಗಿಸಲು ಸರ್ಕಾರ ಮುಂದಾಗಿದೆ. ಹಾಗಾಗಿ ಮೊದಲ ಬಾರಿಗೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ದೇವಾಲಯದಲ್ಲಿನ 15 ಹುಂಡಿಗಳ ಪೈಕಿ 5 ಹುಂಡಿಗಳ ಎಣಿಕೆ ಕಾರ್ಯ ನಡೆಸಲಾಗಿದೆ. ಉಳಿದ 10 ಹುಂಡಿಗಳ ಎಣಿಕೆಯನ್ನು ಬುಧವಾರ ಅಥವಾ ಗುರುವಾರ ನಡೆಸಲು ನಿರ್ಧರಿಸಲಾಗಿದೆ.
ಇದುವರೆಗೂ ಸಾರ್ವಜನಿಕರನ್ನು ಬಳಸಿಕೊಂಡು ಹುಂಡಿಗಳ ಎಣಿಕೆ ಮಾಡಲಾಗುತ್ತಿತ್ತು. ಇನ್ನುಮುಂದೆ ಹೋಂಗಾರ್ಡ್ ಮತ್ತು ಸರ್ಕಾರಿ ಸಂಸ್ಥೆಗಳ ಉದ್ಯೋಗಿಗಳನ್ನು ಮಾತ್ರವೇ ಬಳಸಿಕೊಳ್ಳಬೇಕೆಂದು ಕಳೆದ ವಾರ ಜಿಲ್ಲಾಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ 50 ಮಂದಿ ಹೋಂಗಾರ್ಡ್‌ಗಳು ಹಾಗೂ ಇಲಾಖೆಯ 35 ಸಿಬ್ಬಂದಿಯಿಂದ ಹುಂಡಿಗಳ ಎಣಿಕೆ ಮಾಡಲಾಗಿದೆ.
ಆಷಾಢ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರಿಂದ ಹುಂಡಿಗಳು ತುಂಬಿದ್ದವು. ಹಾಗಾಗಿ ಎಣಿಕೆ ಕಾರ್ಯ ಆರಂಭಿಸಲಾಗಿದೆ. ಶ್ರಾವಣ ಮಾಸ ಆರಂಭವಾಗಿದ್ದು, ನಾಗರಪಂಚಮಿ, ವರಮಹಾಲಕ್ಷ್ಮೀ ಹಬ್ಬ ಸೇರಿ ಮಂಗಳವಾರ, ಶುಕ್ರವಾರದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲಿದ್ದಾರೆ.
9.50 ಕೆ.ಜಿ. ಬೆಳ್ಳಿ ಕವಚ ದೇಣಿಗೆ
ವಿಜಯನಗರದ ಶಾಸಕ ಎಂ. ಕೃಷ್ಣಪ್ಪ ಅವರು ಬನಶಂಕರಿ ದೇವಿ ದೇವಾಲಯಕ್ಕೆ 9.50 ಕೆ.ಜಿ. ತೂಕದ ಬೆಳ್ಳಿ ಕವಚವನ್ನು ದೇಣಿಗೆಯಾಗಿ ನೀಡಿದ್ದಾರೆ. ಕವಚವು ಮುಖವಾಡ, ತೋಳುಗಳು, ಶಿರ, ಪಾದ, ಸಿಂಹದ ಮುಖ ಹೀಗೆ ಬಿಡಿ ಭಾಗಗಳ ರೂಪದಲ್ಲಿದೆ. ಇದನ್ನು ವಿಶೇಷ ದಿನಗಳಲ್ಲಿ ಬನಶಂಕರಿ ದೇವಿಗೆ ತೊಡಿಸಿ ಪೂಜೆ ಮಾಡಲಾಗುವುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.