ಬೆಂಗಳೂರು: ಬಿಡದಿ ಾರ್ಮ್‌ಹೌಸ್‌ನಲ್ಲಿ ದುಬಾರಿ ಔಷಧಗಳ ಹೆಸರಿನಲ್ಲಿ ಅಗ್ಗದ ಔಷಧಗಳನ್ನು ಮರುಪ್ಯಾಕಿಂಗ್ ಹಾಗೂ ನಕಲಿ ಲೇಬಲ್‌ಗಳೊಂದಿಗೆ ಮಾರಾಟ ಮಾಡುತ್ತಿದ್ದ ಜಾಲದ ಬೆನ್ನು ಬಿದ್ದಿರುವ ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಗಳು ಟರ್ಕಿ, ಯುನೈಟೆಡ್ ಎಮಿರೇಟ್ಸ್, ಅಜರ್ ಬೈಜಾನ್ ದೇಶಗಳಲ್ಲಿ ಹಣಕಾಸು ವ್ಯವಹಾರ ಹೊಂದಿರುವ ಕುರಿತು ತನಿಖೆ ಆರಂಭಿಸಿದೆ.
ನಗರದ ಮಿನರ್ವಾ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್ ಮಾಲೀಕ ವೀರೇಶ್ ಕುಮಾರ್ ಜೈನ್‌ಗೆ ಸೇರಿದ ಸುಮಾರು 9 ಲಕ್ಷ ರೂ. ಮುಟ್ಟುಗೋಲು ಹಾಕಿಕೊಂಡಿತ್ತು. ಇದರಿಂದ ತನಿಖೆ ಮತ್ತಷ್ಟು ಚುರುಕುಗೊಳಿಸಿರುವ ಇಡಿ ಇ.ಡಿ ಆರೋಪಿಗಳು ವಿದೇಶದಲ್ಲೂ ಹಣಕಾಸು ವಹಿವಾಟು ಹೊಂದಿರುವುದನ್ನು ಗುರುತಿಸಿದೆ ಎನ್ನಲಾಗಿದೆ.
ಅಕ್ರಮದಲ್ಲಿ ಪಾಲ್ಗೊಂಡಿರುವ ಆರೋಪಿ ಆರ್.ಪ್ರಶಾಂತ್ ಅಲಿಯಾಸ್ ಪ್ರಶಾಂತ್ ರಾಜನ್ ಬಾಬು ವಿದೇಶಿ ಹಣಕಾಸು ವ್ಯವಹಾರ ಹೊಂದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ತನಿಖಾಧಿಕಾರಿಗಳು ಅಜರ್‌ಬೈಜಾನ್, ಟರ್ಕಿಯಲ್ಲಿ ಖಾಸಗಿ ಕಂಪನಿ, ಏಜೆನ್ಸಿಗಳ ಜತೆ ಸಂಪರ್ಕ ಹೊಂದಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತು ರಚನೆ ಮಾಡಿರುವ ಎಸ್‌ಐಟಿ ತಂಡ ಪ್ರತ್ಯೇಕ ತನಿಖೆ ಕೈಗೊಂಡು, ಆರೋಪಿ ಪ್ರಶಾಂತ್ ಹಲವು ಬಾರಿ ಟರ್ಕಿಗೆ ಪ್ರಯಾಣಿಸಿದ್ದ ಮಾಹಿತಿ ಪತ್ತೆ ಮಾಡಿತ್ತು. ದುಬಾರಿ ಬೆಲೆಯ ಬ್ರ್ಯಾಂಡ್ ಔಷಧಗಳಿಗೆ ಸಂಬಂಧಿಸಿದ ಲೇಬಲ್‌ಗಳನ್ನು ಪಡೆಯಲು ಅವರು ಟರ್ಕಿಗೆ ತೆರಳುತ್ತಿದ್ದರು ಎಂಬ ಅನುಮಾನ ಇತ್ತು.
ದೊಡ್ಡ ಮಟ್ಟದಲ್ಲಿ ಹಣಕಾಸು ವ್ಯವಹಾರ ಹೊಂದಿರುವುದನ್ನು ಪರಿಗಣಿಸಿರುವ ಇಡಿ ಅಧಿಕಾರಿಗಳು ಅಜರ್ ಬೈಜಾನ್, ಶಾರ್ಜಾ ದೇಶದಲ್ಲಿ ಪ್ರಶಾಂತ್ ಕೆಲವು ತಿಂಗಳ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಅಲ್ಲಿ ಯಾವುದೆಲ್ಲ ವ್ಯವಹಾರ ನಡೆಸಿದ್ದ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ನಕಲಿ ಔಷಧ ಮಾರಾಟದ ಕುರಿತು ಅಕ್ರಮ ಹಣ ವರ್ಗಾವಣೆಯಾಗಿರುವ ಕುರಿತು ಇಡಿ ಪಿಎಂಎಲ್ ಕಾಯ್ದೆ ಅಡಿ ತನಿಖೆ ಚುರುಕುಗೊಳಿಸಿದೆ.
ದೇಶದ ವಿವಿಧ ರಾಜ್ಯಗಳಲ್ಲೂ ನಕಲಿ ಔಷಧ ಪೂರೈಕೆ ಹಾಗೂ ಮಾರಾಟದಿಂದ ಬಂದಿರುವ ಹಣವನ್ನು ಆರೋಪಿಗಳು ಹೇಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು ಮತ್ತು ಅದನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದು ಇಡಿ ತನಿಖೆಯಿಂದಷ್ಟೇ ತಿಳಿಯಬೇಕಿ. ಆರೋಪಿಗಳ ಮತ್ತು ಅವರ ಸಂಬಂಧಿಕರ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆಯೂ ಇಡಿ ತನಿಖೆ ಆರಂಭಿಸಿದೆ. ಹೊರ ರಾಜ್ಯದ ಔಷಧ ತಯಾರಿಕಾ ಕೇಂದ್ರಗಳಿಂದ ಅಗ್ಗದ ಬೆಲೆಯ ಔಷಧಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿ, ಅವುಗಳನ್ನು ಹೊಸ ಸೀಸಗಳಲ್ಲಿ ತುಂಬಿ ದುಬಾರಿ ಫೈಜರ್ ಕಂಪನಿಯ ಝಾವಿಸೆಫ್ಟಾ, ಎಂಬ್ಲಾವಿಯೋ ಮತ್ತಿತರ ಔಷಧಗಳ ಹೆಸರಿನಲ್ಲಿ ಮರುಲೇಬಲ್ ಮಾಡಲಾಗುತ್ತಿತ್ತು. ಸಾಮಾನ್ಯ ಔಷಧಗಳನ್ನು ಫೈಜರ್ ಕಂಪನಿಯ ಬ್ರಾೃಂಡ್ ಹೆಸರಿನ ಲೇಬಲ್‌ಗಳೊಂದಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಇಡಿ ತನಿಖೆಯಲ್ಲಿ ತಿಳಿದುಬಂದಿದೆ.
ಆಗಸ್ಟ್ 18ರಂದು ಔಷಧ ನಿಯಂತ್ರಣ ಪ್ರಾಧಿಕಾರ ಮತ್ತು ಪೊಲೀಸರು ಜಂಟಿಯಾಗಿ ತಾವರೆಕೆರೆ ಸಮೀಪದ ಚಿಕ್ಕತಂಡ್ಯ ಗ್ರಾಮದ ನಿವಾಸವೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳು ಯಾವುದೇ ಮಾನ್ಯ ಪರವಾನಗಿ, ಅನುಮತಿ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಔಷಧಗಳು ಹಾಗೂ ಔಷಧೀಯ ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿತ್ತು. ಅಲ್ಲದೆ, ಸಂಗ್ರಹಿಸಿಟ್ಟಿದ್ದ ಔಷಧಗಳ ಲೇಬಲ್‌ಗಳನ್ನು ಬದಲಾಯಿಸುತ್ತಿದ್ದ ಆರೋಪವೂ ಕೇಳಿ ಬಂದಿತ್ತು.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಹಕ್ಕುಸ್ವಾಮ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಅಪರಾಧಗಳು ಪಿಎಂಎಲ್ಎ ಕಾಯ್ದೆಯ ಅಡಿಯಲ್ಲಿ ನಿಗದಿತ ಅಪರಾಧಗಳಾಗಿರುವ ಹಿನ್ನೆಲೆಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.