ಬೆಂಗಳೂರು : ನವರಾತ್ರಿ ಎಂದರೆ ದುಷ್ಟ ಸಂಹಾರ, ಅಧರ್ಮದ ನಾಶದ ಪರ್ವಕಾಲ. ಈ ಹಿನ್ನಲೆಯಲ್ಲಿ ಆಶ್ವೀಜ ಶುದ್ದ ಪ್ರತಿಪದೆಯಿಂದ ಆರಂಭವಾಗುವ ನವರಾತ್ರಿ ಆಚರಣೆಗೆ ವಿಶೇಷ ಮಹತ್ವವಿದೆ. ಭಾನುವಾರ (ಅ.11) ದಿಂದ ಆರಂಭವಾಗುವ ನವರಾತ್ರಿ ಆಚರಣೆಗೆ ದೇವಾಲಯಗಳಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಬಾರಿ ವಿಶೇಷವಾಗಿ ನವರಾತ್ರಿ 9 ದಿನದ ಬದಲಿಗೆ 10 ದಿನಗಳು ಬಂದಿದ್ದು, ಅ.20ರವರೆಗೆ ನಡೆಯಲಿದೆ. ಅ.21ರಂದು ವಿಜಯದಶಮಿ ಪ್ರಯುಕ್ತ ನಾಡಹಬ್ಬ ದಸರಾ ಉತ್ಸವ ನಡೆಯಲಿದೆ.
ಭಾರತೀಯ ಪುರಾಣಗಳ ಪ್ರಕಾರ ಪ್ರತಿ ದೇವರ ಅವತಾರದ ಹಿಂದೆ ದುಷ್ಟ ಸಂಹಾರ ಹಾಗೂ ಶಿಷ್ಟ ಸಂರಕ್ಷಣೆಯ ಪ್ರತೀತಿ ಇದೆ. ನವರಾತ್ರಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇರುವ ಶಕ್ತಿದೇವತೆಗಳ ದೇವಾಲಯಗಳಲ್ಲಿ ದೇವಿಯ ವಿಶೇಷ ಆರಾಧನೆ, ಪೂಜೆ, ಪುರಾಣ, ಪ್ರವಚನಗಳು ನಡೆಯಲಿವೆ. 10 ದಿನಗಳ ಕಾಲ ಪ್ರತಿದಿನ ಒಂದೊಂದು ಅಲಂಕಾರದೊಂದಿಗೆ ದೇವರ ವಿಗ್ರಹವನ್ನು ಸಿಂಗರಿಸಿ ಪೂಜೆ ಸಲ್ಲಿಸುವುದು ನವರಾತ್ರಿಯ ವಾಡಿಕೆ.
ಬೆಂಗಳೂರಿನಲ್ಲಿ ವಿಶೇಷವಾಗಿ ಹೆಬ್ಬಾಳ ದಸರಾ ಎಂದೇ ಪ್ರಸಿದ್ದವಾಗಿರುವ ಬೆಂಗಳೂರು ದಸರಾ ಮಹೋತ್ಸವಕ್ಕೆ ಭಾನುವಾರ ಚಾಲನೆ ದೊರೆಯಲಿದೆ. ಜೆ.ಸಿ.ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ 10 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸುತ್ತಮುತ್ತಲ ಗ್ರಾಮಗಳ ದೇವರು, ನಾಡದೇವತೆ ಚಾಮುಂಡೇಶ್ವರಿ ಹಾಗು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ವೇದಿಕೆಗೆ ತಂದು ಉತ್ಸವಕ್ಕೆ ಚಾಲನೆ ನೀಡಲಾಗುವುದು. ಪ್ರತಿದಿನ ಸಂಜೆ ಜನಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಜನ ಆಗಮಿಸುವ ನಿರೀಕ್ಷೆ ಇದೆ.
ದೇವಾಲಯಗಳಲ್ಲಿ ವಿಶೇಷ ಪೂಜೆ
ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಹಲವು ದೇವಾಲಯಗಳಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ಬನಶಂಕರಿ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ದೇವಿಗೆ 9 ದಿನಗಳ ಕಾಲ ವಿಶೇಷ ಅಲಂಕಾರ ಮಾಡಲಾಗುತ್ತದೆ. ಪ್ರತದಿನ ಬೆಳಗ್ಗೆ ವಿವಿಧ ಅಭಿಷೇಕ, ಪೂಜೆಯನ್ನು ನೆರವೇರಿಸಲಾಗುತ್ತದೆ. ಭಕ್ತರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ದೇವಿ ಪಾರಾಯಣವನ್ನು ನಡೆಸಲಾಗುತ್ತದೆ.
ಉತ್ತರಹಳ್ಳಿಯಲ್ಲಿರುವ ಅವಧೂತ ಶ್ರೀವಿನಯ ಗುರೂಜಿ ಆಶ್ರಮದಲ್ಲಿ ನವರಾತ್ರಿ ಅಂಗವಾಗಿ 10 ದಿನಗಳ ಕಾಲ ಪ್ರತಿದಿನ ಶ್ರೀಚಕ್ರ ಸಹಿತ ವಾರಾಹಿ ಅಮ್ಮನವರಿಗೆ ವಿಶೇಷ ಅಭಿಷೇಕ ನಡೆಸಲಾಗುತ್ತದೆ. ಅಭಿಷೇಕದ ನಂತರ ವಿಶೇಷ ಅಲಂಕಾರದೊಂದಿಗೆ ಗುರೂಜಿ ದೇವಿಗೆ ಮಹಾಮಂಗಳಾರತಿ ನೆರವೇರಿಸಲಿದ್ದಾರೆ.
ಮಲ್ಲೇಶ್ವರದ ಸರ್ಕಲ್ ಮಾರಮ್ಮದೇವಾಲಯದಲ್ಲಿ ನವರಾತ್ರಿ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿಸಲಾಗುವುದು. ಈ ದೇವಾಲಯದಲ್ಲಿ ವಿಶೇಷವಾಗಿ ವಾಹನಗಳ ಪೂಜೆಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದ್ದು, ಆಯುಧ ಪೂಜೆಯಂದು ವಾಹನಗಳ ಪೂಜೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಮಲ್ಲೇಶ್ವರದ ಗಂಗಮ್ಮದೇವಿ ದೇವಾಲಯದಲ್ಲಿ ನವರಾತ್ರಿಯ ಅಂಗವಾಗಿ ಪ್ರತಿನಿತ್ಯ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಮಲ್ಲೇಶ್ವರದ 8ನೇ ಅಡ್ಡರಸ್ತೆಯಲ್ಲಿರುವ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಪೂಜೆಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಅಲಂಕಾರಕ್ಕೆ ಪ್ರಸಿದ್ದವಾಗಿರುವ ದೇವಿಯ ವಿವಿಧ ಅಲಂಕಾರಗಳನ್ನು ನೋಡುವುದಕ್ಕಾಗಿಯೇ ಭಕ್ತರು ಈ ದೇವಾಲಯಕ್ಕೆ ಆಗಮಿಸುತ್ತಾರೆ.
ಇನ್ನುಳಿದಂತೆ ಬ್ಯಾಟರಾಯನ ಪುರದ ಗ್ರಾಮದೇವತೆ, ಜಾಲಹಳ್ಳಿಯ ಶಾರದಾಂಬ ದೇವಿ ದೇವಾಲಯ ಮತ್ತು ಮುತ್ಯಾಲಮ್ಮ ದೇವಿ ದೇವಾಲಯ, ಮತ್ತಿಕೆರೆ ಚೌಡೇಶ್ವರಿ ದೇವಾಲಯ, ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ಮತ್ತಿತರ ಪ್ರಮುಖ ಶಕ್ತಿದೇವತೆಗಳ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜೆ, ಪ್ರವಚನಗಳನ್ನು ಏರ್ಪಡಿಸಲಾಗಿದೆ.