- ಸಚಿವ ಸಂಪುಟವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಟ್ಟಿಯಲ್ಲ,
- ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ.
- ಪಕ್ಷದ ಲೆಟರ್‌ಹೆಡ್‌ನಲ್ಲಿ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಹಾಗೂ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗಳಿಗೆ ಯಾರನ್ನು ನೇಮಕ ಮಾಡಲಾಗಿದೆ
ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಹೊಸತನವೇ ಇಲ್ಲ. ಭ್ರಷ್ಟಾಚಾರದ ಆರೋಪ ಎದುರಿಸಿದವರು ಹಾಗೂ ಪೇಮೆಂಟ್ ಕೋಟಾ ಮೂಲಕ ಅವಕಾಶ ಪಡೆದವರು ಸಚಿವರಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಂಪುಟ ವಿಸ್ತರಣೆ ಕಸರತ್ತು ನೋಡಿದರೆ, ಸಚಿವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೇ ಮುಖ್ಯಮಂತ್ರಿಗೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಪರಿಶಿಷ್ಟರ ₹187 ಕೋಟಿ ದುರುಪಯೋಗ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಜೈಲು ಸೇರಿದ್ದರೂ, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಲಾಗಿದೆ. ಅವರಿಗೆ ಕ್ಲೀನ್ ಚಿಟ್ ನೀಡಿದ್ದು ಯಾರು ಎಂದು ಪ್ರಶ್ನಿಸಿದರು.
ಕರಾವಳಿ ಹಾಗೂ ಮಲೆನಾಡು ಭಾಗಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿಲ್ಲ. ಯಾದಗಿರಿ, ರಾಯಚೂರು, ವಿಜಯನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಹಿಂದುಳಿದ ಜಿಲ್ಲೆಗಳಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಅನೇಕ ಸಮುದಾಯಗಳಿಗೂ ಪ್ರಾತಿನಿಧ್ಯ ದೊರೆತಿಲ್ಲ ಎಂದು ಹೇಳಿದರು.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಅವರ ಬೆಂಬಲಿಗರೇ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವರು ರಾಜೀನಾಮೆ ನೀಡುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ ಪ್ರಕರಣ ದಾಖಲಿಸುವ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಮೌನವಾಗಿದೆ ಎಂದು ಅವರು ಆರೋಪಿಸಿದರು.
ಸಚಿವ ಸಂಪುಟವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಟ್ಟಿಯಲ್ಲ, ಪೇಮೆಂಟ್ ಲಿಸ್ಟ್ ಎಂದು ಟೀಕಿಸಿದ ಅವರು, ಮಂಕಾಳು ವೈದ್ಯ ಅವರ ಹೆಸರನ್ನು ಕೈಬಿಟ್ಟು ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಸೇರಿಸಿದ್ದು ಯಾಕೆ? ಇದರ ಹಿಂದೆ ಹಣದ ಪ್ರಭಾವ ಪರಿಣಾಮ ಬೀರಿದೆ ಎಂದು ಆರೋಪಿಸಿದರು.
ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದ ಕಾಂಗ್ರೆಸ್, ಈಗ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅಶೋಕ್ ಹೇಳಿದರು.
ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೆ.50 ಮಹಿಳೆಯರಿದ್ದರೂ ಅವರಿಗೆ ಶೂನ್ಯ ಸ್ಥಾನ ನೀಡಲಾಗಿದೆ. ಆದರೆ ಸುಮಾರು ಶೇ.12 ಮುಸ್ಲಿಂ ಸಮುದಾಯಕ್ಕೆ ಮೂರು ಸಚಿವ ಸ್ಥಾನಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರು ಸಂವಿಧಾನದ ಪುಸ್ತಕ ಹಿಡಿದು ಮಾತನಾಡುತ್ತಾರೆ. ಆದರೆ ಪಕ್ಷದ ಲೆಟರ್‌ಹೆಡ್‌ನಲ್ಲಿ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಹಾಗೂ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗಳಿಗೆ ಯಾರನ್ನು ನೇಮಕ ಮಾಡಲಾಗಿದೆ ಎಂದು ಉಲ್ಲೇಖ ಮಾಡಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಕಾವೇರಿ ನೀರು ಹಂಚಿಕೆ ವಿಚಾರ:
ಕಾವೇರಿ ನೀರು ಹಂಚಿಕೆ ಕುರಿತು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ರಾಜ್ಯಕ್ಕೆ ಗಂಭೀರ ಪರಿಸ್ಥಿತಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಅಶೋಕ್ ಹೇಳಿದರು.
ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಬಾರದು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಮಿಳುನಾಡಿನ ರಾಜಕೀಯ ನಾಯಕ ಜೋಸ್ೆ ವಿಜಯ್ ನಡುವಿನ ಭೇಟಿಯನ್ನು ಉಲ್ಲೇಖಿಸಿದ ಅವರು, ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಬರಗಾಲದ ಸಂದರ್ಭದಲ್ಲಿ ಸಭಾಂಗಣ ನವೀಕರಣಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವುದನ್ನೂ ಪ್ರಶ್ನಿಸಿದರು.
ಶುಕ್ರವಾರ ನಡೆಯಲಿರುವ ವಿಧಾನಸಭೆ ಅಧಿವೇಶನದ ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ವಿರುದ್ಧ ಕೈಗೊಳ್ಳಬೇಕಾದ ಹೋರಾಟದ ಕುರಿತು ಬಿಜೆಪಿ ಚರ್ಚೆ ನಡೆಸಲಿದೆ ಎಂದು ತಿಳಿಸಿದರು.
*ಸಂಪುಟದ ಒಟ್ಟು ಕಸರತ್ತು ನೋಡಿದರೆ, ಮುಖ್ಯಮಂತ್ರಿಯ ಪರಮಾಧಿಕಾರವನ್ನೇ ಹೈಕಮಾಂಡ್ ಕಿತ್ತುಕೊಂಡಿದೆ. ಆದ್ದರಿಂದ ಡಿಕೆಶಿ ಅವರು, ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಯಾಗಿದ್ದಾರೆ.
-ಪ್ರತಿಪಕ್ಷ ನಾಯಕ ಆರ್.ಅಶೋಕ್