Corporate Vs Creator ಚಿತ್ರ Instagram 
ರಾಜ್ಯ

ಉದ್ಯೋಗ ಭದ್ರತೆ vs ಸಂಪೂರ್ಣ ಸ್ವಾತಂತ್ರ್ಯ: ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಬೆಂಗಳೂರು ಯುವತಿಯರು! Corporate Vs Creator

ಪ್ರಮುಖ ಮುಖ್ಯಾಂಶಗಳು

  • ಸಾಂಪ್ರದಾಯಿಕ 9 ರಿಂದ 5 ರ ಕಾರ್ಪೊರೇಟ್ ಉದ್ಯೋಗಗಳು ಇಂದಿನ ದಿನಗಳಲ್ಲಿ ಯಶಸ್ಸಿನ ಏಕೈಕ ಮಾರ್ಗವಾಗಿ ಉಳಿದಿಲ್ಲ
  • ಕಂಟೆಂಟ್ ಕ್ರಿಯೇಷನ್ ಮತ್ತು ಡಿಜಿಟಲ್ ಬ್ರ್ಯಾಂಡಿಂಗ್ ಇಂದು ಕಾರ್ಪೊರೇಟ್ ಉದ್ಯೋಗಗಳಿಗಿಂತಲೂ ಹೆಚ್ಚಿನ ಲಾಭ ನೀಡುವ ಪರ್ಯಾಯ ವೃತ್ತಿಯಾಗಿದೆ
  • ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ BBA ವ್ಯಾಸಂಗ ಮಾಡಿದ್ದರೂ, ಅಂತಿಮವಾಗಿ ಸಂಪೂರ್ಣ ವಿಭಿನ್ನ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ
ಬೆಂಗಳೂರು: ಸಾಂಪ್ರದಾಯಿಕ 9 ರಿಂದ 5 ರ ಕಾರ್ಪೊರೇಟ್ ಉದ್ಯೋಗಗಳು ಇಂದಿನ ದಿನಗಳಲ್ಲಿ ಯಶಸ್ಸಿನ ಏಕೈಕ ಮಾರ್ಗವಾಗಿ ಉಳಿದಿಲ್ಲ. ವಿಡಿಯೋ ನಿರ್ಮಾಣ, ಡಿಜಿಟಲ್ ಬರವಣಿಗೆ ಹಾಗೂ ಆನ್‌ಲೈನ್‌ನಲ್ಲಿ ಸ್ವಂತ ಬ್ರ್ಯಾಂಡ್ ಬೆಳೆಸುವುದು ಕಾರ್ಪೊರೇಟ್ ಕೆಲಸಕ್ಕಿಂತಲೂ ಹೆಚ್ಚಿನ ಲಾಭ ತಂದುಕೊಡುವ ಹೊಸ ಯುಗಕ್ಕೆ ನಾವು ಕಾಲಿಟ್ಟಿದ್ದೇವೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಕಂಟೆಂಟ್ ಕ್ರಿಯೇಷನ್ (Corporate Vs Creator) ಎಂಬುದು ಅತ್ಯಂತ ಗಂಭೀರ ಹಾಗೂ ಅಧಿಕ ಆದಾಯ ತರುವ ಪರ್ಯಾಯ ವೃತ್ತಿಯಾಗಿ ಹೊರಹೊಮ್ಮಿದೆ.
ಅನೇಕ ಕಂಟೆಂಟ್ ಕ್ರಿಯೇಟರ್‌ಗಳಿಗೆ ಬ್ರ್ಯಾಂಡ್ ಒಪ್ಪಂದಗಳು, ಜಾಹೀರಾತು ಆದಾಯ ಹಾಗೂ ಡಿಜಿಟಲ್ ಉತ್ಪನ್ನಗಳ ಮಾರಾಟವು ಕಾರ್ಪೊರೇಟ್ ಉದ್ಯೋಗಗಳಲ್ಲಿ ಸಿಗುವ ವೇತನ ಮತ್ತು ಆರ್ಥಿಕ ಸ್ಥಿರತೆಗೆ ಸರಿಸಮಾನವಾಗಿ ನಿಲ್ಲುತ್ತಿವೆ.

ನೆಟ್ಟಿಗರ ಗಮನ ಸೆಳೆದ ಬೆಂಗಳೂರು ಯುವತಿಯರ ವಿಡಿಯೋ

ಇತ್ತೀಚೆಗೆ ಬೆಂಗಳೂರಿನ ಇಬ್ಬರು ಯುವತಿಯರು ಕಾರ್ಪೊರೇಟ್ ಕೆಲಸ ಮತ್ತು ಪೂರ್ಣ ಸಮಯದ ಕಂಟೆಂಟ್ ಕ್ರಿಯೇಷನ್ ನಡುವಿನ ನೈಜ ವ್ಯತ್ಯಾಸಗಳನ್ನು ಹೋಲಿಸಿ ಮಾಡಿದ ಇನ್‌ಸ್ಟಾಗ್ರಾಮ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಈ ವಿಡಿಯೋದಲ್ಲಿ 'EY' ಸಂಸ್ಥೆಯಲ್ಲಿ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅನನ್ಯಾ ಹಾಗೂ ಸ್ವತಂತ್ರ ಕಂಟೆಂಟ್ ಕ್ರಿಯೇಟರ್ ಆಗಿರುವ ಮಾನ್ಸೂನ್ ಭಾಗವಹಿಸಿದ್ದಾರೆ. ಕುತೂಹಲಕಾರಿ ವಿಷಯವೆಂದರೆ, ಇಬ್ಬರೂ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ BBA ವ್ಯಾಸಂಗ ಮಾಡಿದ್ದರೂ, ಅಂತಿಮವಾಗಿ ಸಂಪೂರ್ಣ ವಿಭಿನ್ನ ವೃತ್ತಿಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಬೆಂಗಳೂರು ಯುವತಿಯರು!

ಆರ್ಥಿಕ ಸ್ಥಿರತೆ ಮತ್ತು ಆದಾಯದ ಸವಾಲು

ಇಬ್ಬರೂ ಎತ್ತಿ ತೋರಿಸಿದ ಅತಿ ದೊಡ್ಡ ವ್ಯತ್ಯಾಸವೆಂದರೆ ಆರ್ಥಿಕ ಸ್ಥಿರತೆ. ಅನನ್ಯಾ ಅವರು ಪ್ರತಿ ತಿಂಗಳು ನಿಗದಿತ ದಿನಾಂಕದಂದು ಸಂಬಳ ಪಡೆಯುವುದರಿಂದ ಭವಿಷ್ಯದ ಭದ್ರತೆ ಮತ್ತು ಮನಸ್ಸಿನ ಶಾಂತಿ ಸಿಗುತ್ತದೆ ಎಂದಿದ್ದಾರೆ. ಆದರೆ ಮಾನ್ಸೂನ್ ಹೇಳಿದ ಪ್ರಕಾರ, ಕಂಟೆಂಟ್ ಕ್ರಿಯೇಟರ್‌ಗಳ ಆದಾಯದಲ್ಲಿ ಸ್ಥಿರತೆ ಇರುವುದಿಲ್ಲ; ಗ್ರಾಹಕರಿಂದ ಪಾವತಿ ಪಡೆಯಲು ಹಲವು ಬಾರಿ ಇನ್‌ವಾಯ್ಸ್‌ಗಳನ್ನು ನೀಡಿ, ನಿರಂತರವಾಗಿ ಫಾಲೋ-ಅಪ್ ಮಾಡಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

ದೈನಂದಿನ ದಿನಚರಿ ಮತ್ತು ಉದ್ಯೋಗದ ವಾತಾವರಣ

ಇಬ್ಬರೂ ತಮ್ಮ ದೈನಂದಿನ ಜೀವನಶೈಲಿಯನ್ನು ಹೋಲಿಸಿ ಮಾತನಾಡಿದ್ದಾರೆ. ಅನನ್ಯಾ ತಮ್ಮ ಕಾರ್ಪೊರೇಟ್ ವೇಳಾಪಟ್ಟಿಯು ಅತ್ಯಂತ ನಿಗದಿತ ಹಾಗೂ ಯೋಜನಾಬದ್ಧವಾಗಿರುತ್ತದೆ. ಇದರಲ್ಲಿ ಸಭೆಗಳು, ಕೆಲಸದ ಗಡುವು, ಊಟದ ವಿರಾಮಗಳು ಹಾಗೂ ಮುಂಚಿತವಾಗಿಯೃ ರಜೆ ಯೋಜಿಸಬೇಕಾದ ನಿಯಮಗಳಿರುತ್ತವೆ. ಜೊತೆಗೆ ಕೆಲಸದ ಒತ್ತಡ ಹಾಗೂ ಪ್ರತಿದಿನ ಕಚೇರಿಗೆ ಪ್ರಯಾಣಿಸುವುದು ದೈಹಿಕವಾಗಿ ಆಯಾಸ ತರುತ್ತದೆ ಎಂದು ಒಪ್ಪಿಕೊಂಡಿದ್ದಾರೆ.
ಆದಾಗ್ಯೂ, ಕಾರ್ಪೊರೇಟ್ ಜೀವನದಲ್ಲಿ ಕಂಪನಿ ನೀಡುವ ಲ್ಯಾಪ್‌ಟಾಪ್, ವೈದ್ಯಕೀಯ ವಿಮೆ, ವೇತನ ಸಹಿತ ರಜೆಗಳು ಹಾಗೂ ಜಿಮ್ ಸದಸ್ಯತ್ವದಂತಹ ಸೌಲಭ್ಯಗಳು ಸಿಗುತ್ತವೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದೆಡೆ, ಕಂಟೆಂಟ್ ಕ್ರಿಯೇಟರ್ ಆಗಿ ಮಾನ್ಸೂನ್ ಸ್ವತಂತ್ರ ಜೀವನದ ಚಿತ್ರಣವನ್ನು ನೀಡಿದ್ದಾರೆ. ತಮಗೆ ನಿಗದಿತ ಸಂಬಳವಿಲ್ಲದಿದ್ದರೂ, ಸ್ವಂತ ವೇಳಾಪಟ್ಟಿಯನ್ನು ರೂಪಿಸಿಕೊಳ್ಳುವ, ಬಯಸಿದಾಗ ವಿರಾಮ ತೆಗೆದುಕೊಳ್ಳುವ ಹಾಗೂ ಯಾರ ಅನುಮತಿಯೂ ಇಲ್ಲದೆ ಎಲ್ಲಿಂದ ಬೇಕಾದರೂ ಕೆಲಸ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ನಮ್ಯತೆ ತಮಗಿದೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ, ನಿಗದಿತ ಸೌಲಭ್ಯ ಮತ್ತು ಭದ್ರತೆ ಬಯಸುವವರಿಗೆ ಕಾರ್ಪೊರೇಟ್ ಕೆಲಸ ಸೂಕ್ತವಾದರೆ, ಸ್ವತಂತ್ರ ನಿರ್ಧಾರ ಹಾಗೂ ಸೃಜನಶೀಲತೆಗೆ ಆದ್ಯತೆ ನೀಡುವವರಿಗೆ ಕಂಟೆಂಟ್ ಕ್ರಿಯೇಷನ್ ಉತ್ತಮ ಪರ್ಯಾಯವಾಗಿದೆ ಎಂಬುದನ್ನು ಈ ವಿಡಿಯೋ ಸಾರುತ್ತದೆ (ಏಜೆನ್ಸೀಸ್​).