ವಿಜಯಪುರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ವಸಂತ ಹೊನಮೋಡೆ, ಸಾಹೇಬಗೌಡ ಬಿರಾದಾರ ಇತರರಿದ್ದಾರೆ. 
ರಾಜ್ಯ

ಸಹಕಾರ ಸಚಿವ ಲಕ್ಷ್ಮಣ ಸವದಿ ಪ್ರಾರ್ಥನೆ, ಪ್ರತಿಪಕ್ಷದವರಿಗೆ ಬರದ ಬಗ್ಗೆ ಚರ್ಚಿಸುವ ಸದ್ಭುದ್ಧಿ ಸಿಗಲಿ

ಪ್ರಮುಖ ಮುಖ್ಯಾಂಶಗಳು

  • ಅಧಿವೇಶನದಲ್ಲಿ ಕಾಲಹರಣ ಸಲ್ಲ
  • ಒಬ್ಬ ವ್ಯಕ್ತಿಗಾಗಿ ಹೋರಾಟ ಸರಿಯಲ್ಲ
  • ಸಮರ್ಪಕ ದಾಖಲೆಯೊಂದಿಗೆ ಚರ್ಚಿಸಲಿ

ವಿಜಯಪುರ: ವಿಧಾನ ಮಂಡಲ ಅಧಿವೇಶನದಲ್ಲಿ ಬರಗಾಲದ ಬಗ್ಗೆ ಚರ್ಚೆ ಮಾಡುವ ಸದ್ಭುದ್ಧಿಯನ್ನು ಭಗವಂತ ಪ್ರತಿಪಕ್ಷದವರಿಗೆ ನೀಡಲಿ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ವಾರದಿಂದ ವಿಧಾನ ಮಂಡಲ ಅಧಿವೇಶನ ನಡೆಯಲು ಬಿಡದೇ ಕೇವಲ ಒಬ್ಬ ವ್ಯಕ್ತಿಯ ವಿಚಾರವನ್ನಿಟ್ಟುಕೊಂಡು ಹೋರಾಟ ಮಾಡಲಾಗುತ್ತಿದೆ. ಅದನ್ನು ಬಿಟ್ಟು ಅಧಿವೇಶನ ನಡೆಯಲು ಅವಕಾಶ ಕೊಡಬೇಕು. ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕೆಂದು ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಅಧಿವೇಶನದ ಪೂರ್ವದಲ್ಲೇ ಪ್ರತಿಪಕ್ಷದವರು ಬರದ ಬಗ್ಗೆ ತಂಡಗಳನ್ನು ರಚಿಸಿ ಅಧ್ಯಯನ ಮಾಡಿ, ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿಕೊಂಡು ಓಡಾಡುತ್ತಿದ್ದರು. ಆದರೆ, ಈಗ ನಾಲ್ಕೈದು ದಿನಗಳಿಂದ ಅಧಿವೇಶನದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಸಚಿವ ಬಿ.ನಾಗೇಂದ್ರ ಅವರ ತೇಜೋವಧೆ ಮಾಡಲಾಗುತ್ತಿದೆ. ಈಗಾಗಲೇ ಲೋಕಾಯುಕ್ತ ಸಂಸ್ಥೆಯು ಅವರನ್ನು ಆರೋಪಮುಕ್ತರನ್ನಾಗಿ ಮಾಡಿದೆ. ಪ್ರತಿಪಕ್ಷದವರಲ್ಲಿ ಬೇರೆ ಏನಾದರೂ ದಾಖಲೆಗಳು ಇದ್ದರೆ, ಸದನದಲ್ಲಿ ಮಂಡಿಸಿ ಚರ್ಚೆ ಮಾಡಬೇಕು. ಅದಕ್ಕೆ ಸರ್ಕಾರದಿಂದ ಉತ್ತರ ಪಡೆದುಕೊಳ್ಳಬೇಕು. ಅದನ್ನು ಬಿಟ್ಟು ಕೇವಲ ಕಾಲಹರಣ ಮಾಡುತ್ತಿದ್ದಾರೆ. ಅಲ್ಲದೇ, ಒಬ್ಬ ವ್ಯಕ್ತಿಯ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವುದನ್ನು ನೋಡಿದರೆ, ಪ್ರತಿಪಕ್ಷವಾಗಿ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ, ರೈತರ ಸಾಲ ಮನ್ನಾ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಮುಂಗಾರು ಬರ ಇದ್ದು, ಹಿಂಗಾರು ಸಂಪೂರ್ಣವಾಗಿ ಮುಗಿದಿಲ್ಲ. ಇನ್ನೂ ಆಶಾಭಾವ ಇದೆ. ಹಿಂಗಾರು ನಂತರ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಗಳು ವರದಿ ಕೊಡಬೇಕಿದೆ. ಮೂರು ಇಲಾಖೆಗಳು ಸರ್ಕಾರಕ್ಕೆ ವರದಿ ಕೊಟ್ಟ ನಂತರ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಿದ್ದಾರೆ. ಜತೆಗೆ ಬಹಳ ದಿನಗಳಿಂದ ಮೋಡ ಬಿತ್ತನೆ ಆಗಬೇಕು ಎಂಬುದು ಅನೇಕ ಭಾಗಗಳ ರೈತರ ಬೇಡಿಕೆಯಾಗಿದ್ದು, ಅದನ್ನು ಸಹ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದರು.
ಇನ್ನು, ರಾಜ್ಯದಲ್ಲಿ ಸಹಕಾರಿ ಇಲಾಖೆಯನ್ನು ಇನ್ನಷ್ಟು ಬಲಪಡಿಸುತ್ತೇನೆ. ಕೇಂದ್ರದಲ್ಲಿ ಪ್ರತ್ಯೇಕವಾಗಿ ಸಹಕಾರ ಇಲಾಖೆಯು ರಚನೆಯ ನಂತರದಲ್ಲಿ ರಾಜ್ಯಕ್ಕೆ ಯಾವುದೇ ವಿಶೇಷವಾದ ಯೋಜನೆ ಬಂದಿರುವ ಉದಾಹರಣೆ ಇಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಆನಂತರದಲ್ಲಿ ರಾಜ್ಯಕ್ಕೆ ಏನು ಸಿಗಲಿದೆ ಎಂಬುದು ಗೊತ್ತಾಗಲಿದೆ ಎಂದು ಸವದಿ ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಕಾರ್ಜುನ ಲೋಣಿ, ಮುಖಂಡರಾದ ಸಾಹೇಬಗೌಡ ಬಿರಾದಾರ, ವಸಂತ ಹೊನಮೋಡೆ ಇತರರಿದ್ದರು.