ರಾಮನಗರದಲ್ಲಿ ನೂತನವಾಗಿ ನಿರ್ಮಿಸಿದ ಸಮುದಾಯ ಭವನವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ರಂಜಿ ಪೂಣಚ್ಚ, ಮತೀನ್, ವಸಂತ ಕಟ್ಟಿ, ಮಣಿ, ಮಂಜುಳಾ, ವರ್ಗೀಸ್, ರಕ್ಷಿತ್ ಇದ್ದರು.
- ಶಾಸಕ ಎ.ಎಸ್.ಪೊನ್ನಣ್ಣ
- ಬೇಟೋಳಿ ಗ್ರಾಮ ಪಂಚಾಯಿತಿ
ವಿರಾಜಪೇಟೆ; ಸಮಾಜವು ಹಲವು ಧರ್ಮ, ಜಾತಿ ವರ್ಗಗಳಿಂದ ಕೂಡಿದ್ದು, ಅಭಿವೃದ್ಧಿ ಮತ್ತು ಜನಪರವಾದ ಯೋಜನೆ ಕಾರ್ಯಗತಗೊಳಿಸಲು ಜನಸಾಮಾನ್ಯರ ಸಹಕಾರ ಅತ್ಯಗತ್ಯ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ತಾಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರ ಗ್ರಾಮದಲ್ಲಿ ಶಾಸಕರ ಅನುದಾನ ನಿಧಿಯಿಂದ ನೂತನವಾಗಿ ನಿರ್ಮಿಸಿದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
ಈ ಭಾಗದ ಜನರ ಕನಸು ಸಾಕಾರಗೊಂಡಿದೆ. ಜನಹಿತ, ಜನಪರ ಕಾರ್ಯಗಳಿಗೆ ಸ್ಥಳೀಯ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರ ಇದ್ದಲ್ಲಿ ಲೋಕ ಕಲ್ಯಾಣ ಕಾರ್ಯ ಕ್ರಮಗಳು ಸಾಕಾರಗೊಳ್ಳುತ್ತವೆ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸುಮಾರು ಎರಡು ಕೋಟಿ ರೂ.ಗೂ ಅಧಿಕ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಭಾಗದಲ್ಲಿ ಇನ್ನೂ ಸಮಸ್ಯೆಗಳಿದ್ದು, ಅನುದಾನ ಅಧಾರದ ಮೇಲೆ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳಿಗೆ ಅಡಚಣೆಯಾಗದ ರೀತಿಯಲ್ಲಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡಬೇಕು. ಸರ್ವರಿಗೂ ಸಮಾನ ಅವಕಾಶ ನೀಡಬೇಕು. ಅಲ್ಲದೆ ಹೆಚ್ಚಿನ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ಭವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ಈ ಭಾಗದಲ್ಲಿ ಹಲವು ಸ್ತ್ರೀ ಶಕ್ತಿ ಸಂಘಗಳಿದ್ದು ಸಭೆ ಸೇರಲು ಸ್ಥಳವಿಲ್ಲದೆ ಸಮಸ್ಯೆಯಾಗುತ್ತಿತ್ತು. ಇದೀಗ ಗ್ರಾಮಸ್ಥರ ಕನಸು ನನಸಾಗಿದ್ದು, ಶಾಸಕರ ಸಮ್ಮುಖದಲ್ಲಿ ಭವನ ಲೋಕಾರ್ಪಣೆಗೊಂಡಿರುವುದು ಸಂತೋಷದ ವಿಷಯ. ಅಡೆತಡೆಗಳನ್ನು ಮೀರಿ ಪೊನ್ನಣ್ಣ ಅವರು ಜನತೆಯ ಕನಸನ್ನು ನನಸು ಮಾಡಿದ್ದಾರೆ ಎಂದರು.
ವಲಯ ಕಾಂಗ್ರೆಸ್ ಅದ್ಯಕ್ಷ ವರ್ಗಿಸ್, ಬೇಟೋಳಿ ಗ್ರಾಮ ಪಂಚಾಯತಿ ನಿಕಟಪೂರ್ವ ಸದಸ್ಯರಾದ ವಸಂತ್‌ಕಟ್ಟಿ, ರಜಾಕ್, ಲತಾ, ಪ್ರಚಾರ ಸಮಿತಿ ಅದ್ಯಕ್ಷ ಎಚ್.ಎಸ್ ಮತೀನ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ, ಮಾಳೇಟಿರ ಪ್ರಶಾಂತ್ ಉತ್ತಪ್ಪ , ಮಂಜುನಾಥ್, ಪುರಸಭೆ ಮಾಜಿ ನಾಮನಿರ್ದೇಶಿತ ಸದಸ್ಯ ಶಭರಿಶ್ ಶೆಟ್ಟಿ ಇತರರಿದ್ದರು.