ಶಾಲೆ ಅಭಿವೃದ್ಧಿಗೆ ಸಹಕಾರ ಅಗತ್ಯ school-development
ಮುಳಬಾಗಿಲು: ಶಾಲಾ ಮಟ್ಟದಲ್ಲಿ ಎಸ್ಡಿಎಂಸಿ ಸದಸ್ಯರು ಸಕ್ರಿಯವಾಗಿ ಕಾರ್ಯನಿರ್ವಹಿಸಿದರೆ ಪ್ರತಿ ಸರ್ಕಾರಿ ಶಾಲೆ ಅಭಿವೃದ್ಧಿ ಸಾಧ್ಯ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಜಿ.ಕೆ. ಶ್ರೀನಿವಾಸಲು ಹೇಳಿದರು.school-development
ತಾಲೂಕಿನ ಹೆಬ್ಬಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಗ್ರಾಪಂ ಮತ್ತು ಕ್ಲಸ್ಟರ್ ಸಮಿತಿಯ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಎಸ್ಡಿಎಂಸಿ ಅಧ್ಯಕ್ಷ ನಿರಂಜನ ಆರಾಧ್ಯ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಪ್ರತಿ ಸರ್ಕಾರಿ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಹಕ್ಕು, ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಮಿತಿ ಸದಸ್ಯರು ಶಾಲೆಯ ಕುಂದು ಕೊರತೆಗಳ ಬಗ್ಗೆ ಮುಖ್ಯಶಿಕ್ಷಕರ ಚರ್ಚಿಸಿ ಅವುಗಳನ್ನು ಸರಿಪಡಿಸಬೇಕು ಎಂದರು.
ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ತಾಲೂಕು ಅಧ್ಯಕ್ಷ ಹನುಮನಹಳ್ಳಿ ಸಿ. ನಾಗೇಶ್ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸರ್ವ ಸದಸ್ಯರ ಸಭೆ ನಡೆಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು. ನಮ್ಮ ಸಮಿತಿ ತಾಲೂಕಿನಲ್ಲಿ ಜಾಗೃತಿ ಮೂಡಿಸಲು ಪ್ರವಾಸ ಕೈಗೊಳ್ಳಲಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ತಿಂಗಳಿಗೆ ಒಂದು ಬಾರಿ ಪಾಲಕರ ಸಭೆ ನಡೆಸುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವುದು ಕೇವಲ ಶಿಕ್ಷಕರಿಗೆ ಸೀಮಿತವಲ್ಲ, ಶಾಲಾಭಿವೃದ್ಧಿ ಸದಸ್ಯರು, ಗ್ರಾಪಂ ಸದಸ್ಯರು, ಸಮಾಜ ಸೇವಕರು, ಸರ್ಕಾರೇತರ ಸಂಸ್ಥೆಗಳು ಸಹಕರಿಸಬೇಕು, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಇಸಿಒ ಮುನಿಸ್ವಾಮಿ, ಹೆಬ್ಬಣಿ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಬ್ರಹ್ಮಾನಂದರೆಡ್ಡಿ ಮಾತನಾಡಿದರು.
ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ತಾಲೂಕು ಕಾರ್ಯದರ್ಶಿ ಕನ್ನಸಂದ್ರ ಮುನಿಕೃಷ್ಣ, ಉಪಾಧ್ಯಕ್ಷೆ ತೇಜಸ್ವಿನಿ, ಖಜಾಂಚಿ ನಟರಾಜ್, ಸಂಘಟನಾ ಕಾರ್ಯದರ್ಶಿ ಅಮರನಾಥ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಟರಾಮಪ್ಪ, ಗೊಲ್ಲಹಳ್ಳಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಪದ್ಮನಾಭ, ಮುಖ್ಯಶಿಕ್ಷಕ ಶಿವಕುಮಾರ್, ಪ್ರೌಢಶಾಲೆ ಶಿಕ್ಷಕ ಶಿವರಾಜು ಇದ್ದರು.