ಯಾದಗಿರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ನಿರೋಧಕ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಎಸ್​ಪಿ ಪೃಥ್ವಿಕ್​ ಶಂಕರ್​ ಚಾಲನೆ ನೀಡಿದರು. ಡಾ.ಪ್ರೀತಂ, ಅಪರ್​ ಎಸ್​ಪಿ ಧರಣೇಶ್​, ಡಿವೈಎಸ್​ಪಿಗಳಾದ ಸುರೇಶ ನಾಯಕ್​, ಭರತಕುಮಾರ ತಳವಾರ, ಡಾ.ಚಂದ್ರಕಾಂತ ಪೂಜಾರಿ, ಡಾ.ಹೊನಗುಂಟಿ ಇತರರಿದ್ದರು. 
ರಾಜ್ಯ

ವ್ಯಸನಮುಕ್ತ ದೇಶಕ್ಕಾಗಿ ಸಹಕಾರ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಎಸ್​ಪಿ ಪೃಥ್ವಿಕ್​ ಶಂಕರ್​ ಅಭಿಮತ
  • ಮಾದಕ ದ್ರವ್ಯ ನಿರೋಧಕ, ಅಕ್ರಮ ಸಾಗಣೆ ಜಾಗೃತಿ ಜಾಥಾ
ಯಾದಗಿರಿ: ಮಾದಕ ವ್ಯಸನಗಳಿಗೆ ಬಲಿಯಾಗಿ ಅಮೂಲ್ಯ ಜೀವನ ಹಾಳು ಮಾಡಿಕೊಂಡು ನಿಮ್ಮ ಕುಟುಂಬ ತೊಂದರೆಗೆ ಸಿಲುಕಿಸಬೇಡಿ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪೃಥ್ವಿಕ್​ ಶಂಕರ್​ ಹೇಳಿದರು.
ಜಿಲ್ಲಾ ಪೊಲೀಸ್​ ಇಲಾಖೆಯಿಂದ ಇಲ್ಲಿನ ಲುಂಬಿನಿ ಉದ್ಯಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ನಿರೋಧಕ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ವ್ಯಸನ ಹಾಗೂ ನಶಾಮುಕ್ತ ಭಾರತ ಡ್ರಗ್ಸ್​ ಫ್ರೀ ಸಮಾಜ ನಿರ್ಮಾಣಕ್ಕೆ ಪೊಲೀಸ್​ ಇಲಾಖೆಗೆ ಯುವಕರ ಸಹಕಾರ ಬಹಳ ಅಗತ್ಯ ಎಂದರು.
ಮೊದ ಮೊದಲು ಇದನ್ನು ಕುತೂಹಲಕ್ಕೆ, ಗೆಳೆಯರ ಒತ್ತಾಯಕ್ಕೋ ಇಲ್ಲವೇ ಒತ್ತಡಕ್ಕೆ ಒಳಗಾಗಿ ಡ್ರಗ್ಸ್​ ಸೇವನೆ ಮಾಡುತ್ತಾರೆ. ಕಾಲ ಕ್ರಮೇಣ ಅದು ಚಟವಾಗಿ, ದೇಹ ಮತ್ತು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಓದಿನಲ್ಲಿ ಆಸಕ್ತಿ ಕಳೆದು ಹೋಗುತ್ತದೆ. ಕುಟುಂಬ, ಸ್ನೇಹಿತರು, ಆಪ್ತರೊಂದಿಗಿನ ಸಂಬಂಧಗಳು ಹಳಸು ಮೂಲಕ ಅಂತಿಮವಾಗಿ ಅದು ಜೀವವನ್ನೇ ಬಲಿ ಪಡೆಯತ್ತದೆ ಎಂದು ಎಚ್ಚರಿಕೆ ನೀಡಿದರು.
ಎಐಐಎಂಎಸ್​ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಧ್ಯಯನ ಪ್ರಕಾರ ಮದ್ಯ ಮತ್ತು ತಂಬಾಕಿನಂತಹ ದುಶ್ಚಟಕ್ಕೆ ಒಳಗಾದವರು ದೇಶದಲ್ಲಿ 16 ಕೋಟಿ ಜನರಿದ್ದಾರೆ. ಗಾಂಜಾ ವ್ಯಸನಿಗಳ ಸಂಖ್ಯೆ 3 ಕೋಟಿಯಷ್ಟಿದೆ. ಮಾದಕ ವ್ಯಸನವು ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ವ್ಯಾಪಕವಾಗಿ ಹಬ್ಬಿಕೊಳ್ಳುತ್ತಿದೆ. ಇದನ್ನು ನಿಗ್ರಹಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜತೆಗೆ ಸ್ಥಳಿಯ ಆಡಳಿತದ ಕೆಲಸವಾಗಿದ್ದು, ಹೀಗಾಗಿ ಯುವಕರ ಮೂಲಕವೇ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಯಿಮ್ಸ್​ ಆಸ್ಪತ್ರೆಯ ಮನೋವೈದ್ಯ ಡಾ.ಪ್ರೀತಂ ಮಾತನಾಡಿ, ಉಳಿದೆಲ್ಲ ವಸ್ಯನಗಳಿಗಿಂತ ಗಾಂಜಾ ಮಾದರಿಯ ಮಾದಕ ವಸ್ತು ಕ್ಯಾನಬಿಸ್​. ಮಾದಕ ದ್ರವ್ಯ ಸೇವನೆಯಿಂದ ವ್ಯಸನಿಗಳು ತಮ್ಮ ಮೇಲಿನ ನಿಯಂತ್ರಣ ಕಳೆದುಕೊಂಡು ತಮ್ಮ ಪ್ರೀತಿ ಪಾತ್ರರರನ್ನು ತೊರೆಯುತ್ತಾರೆ. ವಿದ್ಯಾರ್ಥಿಗಳು ಭವಿಷ್ಯವನ್ನೇ ಹಾಳು ಮಾಡಿಕೊಂಡರೆ ಉದ್ಯೋಗಸ್ಥರು ತಮ್ಮ ನೌಕರಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಏಕಾಏಕಿ ಡ್ರಗ್ಸ್​ ಬಿಟ್ಟವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯದ ಬಡಿತ ಹೆಚ್ಚಾಗುತ್ತದೆ. ಅವರ ಕೈಕಾಲುಗಳು ನಡುಗುತ್ತವೆ, ಮೂರ್ಛೆ ಹೋಗುವುದು, ತೊದಲು ಮಾತಿನಂತಹ ಲಣ ಕಂಡುಬರುತ್ತವೆ. ತಣವೇ ಅಂತಹವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಎಸ್​ಪಿ ಧರಣೇಶ, ಡಿವೈಎಸ್​ಪಿ ಸುರೇಶ ನಾಯಕ್​, ಐಎಂಎ ಜಿಲ್ಲಾ ಅಧ್ಯ ಡಾ.ಚಂದ್ರಕಾಂತ ಪೂಜಾರಿ, ಡಾ.ಹೊನಗುಂಟಿ ಇತರರಿದ್ದರು. ಡಿವೈಎಸ್​ ಪಿ.ಭರತಕುಮಾರ ತಳವಾರ ನಿರೂಪಿಸಿದರು.
ಕೆಎಸ್​ಪಿ ಆ್ಯಪ್​ ಡೌನ್​ಲೋಡ್​ ಮಾಡಿ
ಅಕ್ರಮ ಚಟುವಟಿಕೆಗಳನ್ನು ಕಡಿವಾಣ ಹಾಕಲು ಪೊಲೀಸ್​ ಇಲಾಖೆಯು ಕೆಎಸ್​ಪಿ ಆ್ಯಪ್​ ಅಭಿವೃದ್ಧಿಪಡಿಸಿದ್ದು, ಪ್ರತಿಯೊಬ್ಬರೂ ಅದನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕು. ಅದರಲ್ಲಿನ ಮಾದಕ ವಸ್ತು ಮುಕ್ತ ಕರ್ನಾಟಕ(ಡ್ರಗ್​ ಫ್ರೀ ಕರ್ನಾಟಕ) ಆಯ್ಕೆ ಮಾಡಿ ನಿಮ್ಮ ಸುತ್ತಲೂ ಯಾರಾದರು ಡ್ರಗ್ಸ್​ ಸೇವಿಸುವುದು, ಮಾರಾಟ ಮಾಡುವುದು, ಗಾಂಜಾ ಬೆಳೆಯುವುದು ಕಂಡುಬಂದಲ್ಲಿ ದೂರು ಕೊಡಬಹುದು. ದೂರುದಾರರ ಮಾಹಿತಿ ಗೌಪ್ಯವಾಗಿ ಇರಿಸಲಾಗುತ್ತದೆ ಎಂದು ಎಸ್​ಪಿ ಹೇಳಿದರು.