ಒಗ್ಗಟ್ಟು ಪ್ರದರ್ಶಿಸಿದರೆ ಸಹಕಾರ solidarity 
ರಾಜ್ಯ

ಒಗ್ಗಟ್ಟು ಪ್ರದರ್ಶಿಸಿದರೆ ಸಹಕಾರ solidarity

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್​ ಹೇಳಿಕೆ
ಬೇತಮಂಗಲ: ರಾಜ್ಯದಲ್ಲಿ ಬಲಿಜ ಸಮುದಾಯ ಬಲಪಡಿಸಲು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದರೆ ನಿಮ್ಮೊಂದಿಗೆ ಶಕ್ತಿಯಾಗಿ ನಿಲ್ಲುತ್ತೇನೆ ಎಂದು ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್​ ಹೇಳಿದರು.solidarity
ಕೆಜಿಎಫ್​ ತಾಲೂಕು ಬೇತಮಂಗಲದಲ್ಲಿ ಶುಕ್ರವಾರ ಆಯೋಜಿಸಿದ್ದ ಕೈವಾರ ತಾತಯ್ಯ 300ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ನಮ್ಮ ಜನಾಂಗದ ನಾರಾಯಣ ಯತೀಂದ್ರರು ವಿಶ್ವಕ್ಕೆ ಮಹಾನ್​ ಸಂದೇಶ ನೀಡಿದ್ದಾರೆ. ತಮ್ಮ ಅನುಭವವನ್ನು ತತ್ವಪದಗಳ ಮೂಲಕ ಸಮಾಜಕ್ಕೆ ಹಂಚಿದ್ದಾರೆ ಎಂದರು.
ಬಲಿಜ ಜನಾಂಗವು 3ಎ ಮೀಸಲಾತಿಯಲ್ಲಿದ್ದಾಗ ಸಾಕಷ್ಟು ಹೋರಾಟ ಮಾಡಿದ್ದೆವು. ಆದರೆ ಯಾರೂ ಸಹ ನಮ್ಮ ಕಷ್ಟಕ್ಕೆ ಸ್ಪಂದಿಸಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2ಎಗೆ ಸೇರಿಸುವ ಮೂಲಕ ಕನಸು ನನಸು ಮಾಡಿದ್ದಾರೆ ಎಂದು ತಿಳಿಸಿದರು.
ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿ ಭಾಗದಲ್ಲಿರುವ ಕೆಜಿಎಫ್​ ತಾಲೂಕಿನಲ್ಲಿ ಬಲಿಜ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಹಕ್ಕು ಪಡೆಯಬೇಕು. ತಾಲೂಕಿನಲ್ಲಿ ಸರ್ಕಾರಿ ಸ್ಥಳ ನೀಡಿದರೆ ಜನಾಂಗದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಟ್ಟಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಸಂಪಂಗಿ ಮಾತನಾಡಿ, ಜನಾಂಗದವರಿಗೆ ನಿವೇಶನ ಕೊಡಿಸುವ ಜತೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೋಟಿಲಿಂಗ ದೇವಾಲಯ ಆಡಳಿತಾಧಿಕಾರಿ ಕೆ.ವಿ.ಕುಮಾರಿ ಮಾತನಾಡಿ, ಬಲಿಜ ಜನಾಂಗದವರು ಬಳೆ ಮಾರಾಟ ನಂಬಿ ಜೀವನ ಸಾಗಿಸುತ್ತಿದ್ದ ಕಾಲ ಈಗ ಬದಲಾಗಿದೆ. ನಮ್ಮಲ್ಲಿ ಸಂಘಟನೆಯ ಒಗ್ಗಟ್ಟು ಇಲ್ಲ. ಆದ್ದರಿಂದ ಹಲವು ಕ್ಷೇತ್ರಗಳಲ್ಲಿ ಇನ್ನೂ ಹಿಂದುಳಿದಿದ್ದೇವೆ. ಕಮ್ಮಸಂದ್ರದಲ್ಲಿ ನಮ್ಮ ಸ್ವಾಮಿಗಳಾದ ಶ್ರೀ ಸಾಂಭಶಿವಮೂರ್ತಿ ಸ್ವಾಮೀಜಿ ವಿಶ್ವವೇ ಇತ್ತ ತಿರುಗಿ ನೋಡುವಂತೆ ದೇವಾಲಯ ಸ್ಥಾಪನೆ ಮಾಡುವ ಮೂಲಕ ಆಧ್ಯಾತ್ಮಿಕ, ಸಾಮಾಜಿಕವಾಗಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.
ಖ್ಯಾತ ಜನಪದ ಗಾಯಕ, ಜನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್​ ಮಾತನಾಡಿ, ಕೈವಾರ ತಾತಯ್ಯ ಜನಪದ ಲೋಕದ ಮಹಾ ಪುರುಷರಾಗಿದ್ದರು. ಅವರು ಹೇಳಿದ್ದ ಅಥವಾ ಬರೆದಿದ್ದ ಕಾಲಜ್ಞಾನ ಇಂದಿಗೂ ನಡೆಯುತ್ತಿದೆ ಎಂದರು.
ದೇವಾಲಯದಿಂದ ಕೈವಾರ ತಾತಯ್ಯ ಮತ್ತು ಕೋಟಿಲಿಂಗ ದೇವಾಲಯ ಸಂಸ್ಥಾಪಕ ಧಮಾರ್ಧಿಕಾರಿ ಶ್ರೀ ಸಾಂಭಾಷಿವ ಮೂರ್ತಿ ಸ್ವಾಮೀಜಿ ರವರ ಭಾವಚಿತ್ರಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು.
ಶಾಸಕಿ ರೂಪಕಲಾ, ರಾಜ್ಯ ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್​ ಕುಮಾರ್​, ಮಾವು ಮಂಡಳಿ ಮಾಜಿ ಅಧ್ಯಕ್ಷ ವಾಸುದೇವ್​, ಜಿಪಂ ಮಾಜಿ ಸದಸ್ಯ ಬುಜ್ಜಿ ನಾಯ್ಡು, ಬೀವಿ ಮಹೇಶ್​, ಅಂಬರೀಶ, ನಾಗರಾಜು, ಸಂಘದ ಅಧ್ಯಕ್ಷ ಕೆ.ಸಿ.ನಾಗರಾಜ್​, ಮಾಜಿ ಗ್ರಾಪಂ ಅಧ್ಯಕ್ಷೆ ಮಮತಾ ಗಣೇಶ್​, ಸುನಿಲ್​ಕುಮಾರ್​ ಇತರರು ಇದ್ದರು