ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪರೀಕ್ಷಾ ಹಗರಣಕ್ಕೆ ಸಂಬಂಧಿಸಿದಂತೆ ಶಿವಶಂಕರಪ್ಪ ಸಾಹುಕಾರ್ 35 ಕೋಟಿ ರೂ.ವೆಚ್ಚದಲ್ಲಿ ಕನ್ವೆನ್ಷನ್ ಹಾಲ್, ರೆಸ್ಟೋರೆಂಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದರು ಎಂಬುದು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯಿಂದ ಬಹಿರಂಗವಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಸಾಹುಕಾರ್, ಪಶುವೈದ್ಯಾಧಿಕಾರಿ ಮತ್ತು ಜಲಸಂಪನ್ಮೂಲ ಇಲಾಖೆ ಸೇರಿ ವಿವಿಧ ಪರೀಕ್ಷಾ ನೇಮಕಾತಿಯಲ್ಲೂ ಅಕ್ರಮ ನಡೆಸಿರುವ ಬಗ್ಗೆ ಅಭ್ಯರ್ಥಿಗಳಿಂದ ಬಂದ ಲಂಚದ ಹಣದಿಂದ ಖಾಸಗಿ ಶಾಲೆ, ಮದುವೆ ಮಂಟಪ ಹಾಗೂ ರೆಸ್ಟೋರೆಂಟ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ಸದಾಶಿವನಗರದಲ್ಲಿರುವ ಸಾಹುಕಾರ್ ನಿವಾಸ್ ಹಾಗೂ ಬಿದರ್ ಜಿಲ್ಲೆ ಸೇರಿ ರಾಜ್ಯದ ವಿವಿಧ 21 ಕಡೆ ಇ.ಡಿ ಅಧಿಕಾರಿಗಳು ಆಗಸ್ಟ್ 18ರಂದು ನಡೆಸಿದ ದಾಳಿ ವೇಳೆ ಸಾಹುಕಾರ್ ಮನೆಯಲ್ಲಿ ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು. ಅವುಗಳ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಅಕ್ರಮ ಹಾಗೂ ಮೂರನೇ ವ್ಯಕ್ತಿಯ ಮೂಲಕ ಕನ್ವೆನ್ಷನ್ ಹಾಲ್, ರೆಸ್ಟೋರೆಂಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಅದಕ್ಕೆ ಸಂಬಂಧಿಸಿದ ನಕ್ಷೆ, ಹಣಕಾಸು ವಿವರಗಳು ಪತ್ತೆಯಾಗಿರುವ ದಾಖಲೆ ಸಮೇತ ಇಡಿ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮದ್ರಕಿ ಗ್ರಾಮದ ತಮ್ಮಜಮೀನಿನಲ್ಲಿ ಬೃಹತ್ ಯೋಜನೆ ರೂಪಿಸಲು ಸಾಹುಕಾರ್ ಮತ್ತು ಅವರ ಕುಟುಂಬ ಮುಂದಾಗಿತ್ತು. ಈ ಬಗ್ಗೆ ಇಡಿ ಅಧಿಕಾರಿಗಳ ಪ್ರಶ್ನೆಗೆ ಕನ್ವೆನ್ಷನ್ ಹಾಲ್, ರೆಸ್ಟೋರೆಂಟ್ ಬಗ್ಗೆ ಆಸಕ್ತಿ ಇಲ್ಲ ಎಂಬ ಹೇಳಿಕೆ ನೀಡಿದ್ದರು. ಅಲ್ಲದೇ ಮೂರನೇ ವ್ಯಕ್ತಿಯಾಗಿರುವ ಶಿವು ಎಂಬುವರು ತಮ್ಮ ಮನೆಗೆ ಆಗಮಿಸಿದ್ದ ವೇಳೆ ಅವುಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂಬುದಾಗಿ ಹೇಳಿದ್ದರು.
ಏಳು ಎಕರೆ ಜಮೀನು:
ಅಕ್ರಮ ಆಸ್ತಿ ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ತೀವ್ರಗೊಳಿಸಿದ್ದ ಇ.ಡಿ ಅಧಿಕಾರಿಗಳಿಗೆ, ಸಾಹುಕಾರ್ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಹೆಸರಿನಲ್ಲಿ 4.15 ಎಕರೆ, 1 ಎಕರೆ ಹಾಗೂ 3 ಎಕರೆ ಜಮೀನು ಪತ್ತೆಯಾಗಿದೆ. ಈ ಜಮೀನಿನಲ್ಲೇ ಕನ್ವೆನ್ಷನ್ ಹಾಲ್, 30 ಕೊಠಡಿಯ ಖಾಸಗಿ ಶಾಲೆ, ರೆಸ್ಟೋರೆಂಟ್ ನಿರ್ಮಾಣಕ್ಕೆ ಮುಂದಾಗಿದ್ದರು. ಕಟ್ಟಡ ರೇಖಾ ಚಿತ್ರಗಳು ಸಾಹುಕಾರ್ ಮನೆಯಲ್ಲಿ ಪತ್ತೆಯಾಗಿದ್ದವು. ಶಿವು ಸಾಹುಕಾರ್ ವಿಚಾರಣೆ ವೇಳೆ, ಈ ಯೋಜನೆ, ವಾಸ್ತುಶಿಲ್ಪ ತಯಾರಿ ಸೇರಿ ಇತರೆ ಕೆಲಸವನ್ನು ಶಿವಶಂಕರಪ್ಪ ಸೂಚನೆ ಮೇರೆಗೆ ನಡೆಸಲಾಗಿತ್ತು ಎಂಬ ಹೇಳಿಕೆಯನ್ನು ಅಧಿಕಾರಿಗಳ ಮುಂದೆ ಹೇಳಿದ್ದಾರೆ.
ಸ್ಥಿರಾಸ್ತಿ ಹೂಡಿಕೆಯಲ್ಲಿ ಅಕ್ರಮ ಹಣ:
ಆರೋಪಿ ಸಾಹುಕಾರ್ ಲಂಚದಿಂದ ಬಂದ ಹಣವನ್ನು ಬೀದರ್, ಯಾದಗಿರಿ ಸೇರಿ ಹಲವು ಕಡೆ ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಭ್ರಷ್ಟಾಚಾರದಿಂದ ಬಂದ ಹಣವನ್ನು ಮೂರನೇ ವ್ಯಕ್ತಿಯ ಹೆಸರಿನಲ್ಲಿ ಕಾನೂನು ಬದ್ಧವಾಗಿ ತಾನು ಸಂಪಾಧಿಸಿದ ಆಸ್ತಿ ಎಂದು ತೋರಿಸಿಕೊಳ್ಳಲು ಮುಂದಾಗಿದ್ದರು. ಸಾಹುಕಾರ್ ನಿವಾಸದಲ್ಲಿ 35 ಕೋಟಿ ರೂ.ವೆಚ್ಚದ ಯೋಜನೆ ದಾಖಲೆಗಳು ಅಷ್ಟೇ ಅಲ್ಲದೇ ಸಾಹುಕಾರ್ ಪುತ್ರ ಸುದರ್ಶನ್ ಎಸ್.ಸಾಹುಕಾರ್ ಬ್ಯಾಂಕ್ ಖಾತೆಯಲ್ಲಿ 25.43 ಲಕ್ಷ ರೂ. ದೇವರಗುಂಡಗುರ್ತಿ ಗ್ರಾಮದ್ಲಲಿ ಸಿಬಿಎಸ್‌ಸಿ ಶಾಲೆ ನಿರ್ಮಾಣಕ್ಕೆ ನೀಡಿದ ಕೊಡುಗೆ ರಸೀದಿಯಲ್ಲಿ 39 ಲಕ್ಷ ರೂ.ನಲ್ಲಿ ತಪ್ಪ ಪಾಲಿನ ಮೊತ್ತ ಎಂದುಕೊಂಡಿರುವ ದಾಖಲೆ, ಪುತ್ರಿ ಖಾತೆಯಲ್ಲಿ 10 ಲಕ್ಷ, ನಾಗಣ್ಣ ಕಂಠಿ ಎಂಬುವರಿಗೆ ಕೃಷಿ ಭೂಮಿ ಖರೀದಿಸಲು ನೀಡಿದ 35 ಲಕ್ಷ ಅಡ್ವಾನ್ಸ್, ಸೋದರಳಿಯ ಮಲ್ಲಿನಾಥ್ ಎಂಬುವರ ಹೆಸರಿನಲ್ಲಿ 3 ಎಕರೆ ಕೃಷಿ ಜಮೀನು ಖರೀದಿಗೆ 10 ಲಕ್ಷ ನೀಡಿರುವುದು ಸೇರಿ ಕೋಟ್ಯಂತರ ರೂ. ವ್ಯವಹಾರ ಮಾಡಿರುವ ದಾಖಲೆಗಳು ಪತ್ತೆಯಾಗಿವೆ.
ಸಿಐಡಿ ತನಿಖಾ ವರದಿ ಆಧಾರದಲ್ಲಿ ಎಸ್‌ಐಟಿ ತನಿಖೆ!
ಕೆಪಿಎಸ್‌ಸಿ ಹಗರಣದ ಸಂಬಂಧಿ ಸಿಐಡಿ ಅಧಿಕಾರಿಗಳು ಕಳೆದ ಎರಡೂವರೆ ತಿಂಗಳಿಂದ ನಡೆಸಿ, ಸಂಗ್ರಹಿಸಿರುವ ದಾಖಲೆಗಳ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವಿವಿಧ ನೇಮಕಾತಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಾಹುಕಾರ್, ಬಿ.ವಿ.ಗೀತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು ಅವರ ಹೇಳಿಕೆ ಹಾಗೂ ಸಿಐಡಿ ಸಂಗ್ರಹಿಸಿರುವ ಅಕ್ರಮದ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.