ಕಲಬುರಗಿ ಸಿಯುಕೆನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​, ಪ್ರೊ.ಶ್ರೀನಿವಾಸ ತಲಾಬಟ್ಟುಲ, ಡಾ.ಚಿನ್ಮಯ್​ ಸಹಾ, ಪ್ರೊ.ಎಂ.ಅಮರೇಂದ್ರ, ಪ್ರೊ.ಪ್ರಮೋದ ಕುಮಾರ್​ ಇತರರಿದ್ದರು. 
ರಾಜ್ಯ

ಸಮಾಜ, ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಿ

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಕರೆ
  • ಸಿಯುಕೆನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ
ಕಲಬುರಗಿ: ಯುವ ಸಂಶೋಧಕರು ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಿಕೊಂಡು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದದಲ್ಲಿ ಎಲೆಕ್ಟ್ರಾನಿಕ್ಸ್​ ಮತ್ತು ಸಂವಹನ ಇಂಜಿನಿಯರಿಂಗ್​ (ಇಸಿಇ) ವಿಭಾಗದಿಂದ ಗುರುವಾರ ಆಯೋಜಿಸಿದ್ದ ಮುಂದಿನ ಪೀಳಿಗೆಯ ಸಂವಹನ ಮತ್ತು ಮಾಹಿತಿ ಸಂಸ್ಕರಣೆ ಕುರಿತ 2ನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್​ ತಂತ್ರಜ್ಞಾನಗಳು ಮಾನವ ಸೃಜನಶೀಲತೆ, ನೈತಿಕ ಸಂಶೋಧನೆ ಮತ್ತು ಸ್ವತಂತ್ರ ಚಿಂತನೆ ಬಲಪಡಿಸುವ ಸಾಧನಗಳಾಗಬೇಕು. ಆದರೆ ಮಾನವನ ಚಿಂತನೆ ಮತ್ತು ಸೃಜನಶೀಲತೆ ಬದಲಿಸುವಂತಾಗಬಾರದು. ನಮ್ಮ ಸಂಶೋಧನೆ ಪ್ರಯೋಗಾಲಯಗಳಿಗೆ ಸೀಮಿತವಾಗದೆ, ಸಮಾಜದ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಂತಿರಬೇಕು ಎಂದು ಕಿವಿಮಾತು ಹೇಳಿದರು.
ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಪ್ರೊ.ಶ್ರೀನಿವಾಸ ತಲಾಬಟ್ಟುಲ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವ ಸಂಶೋಧಕರು ಹೊಸ ಅವಕಾಶ ಗುರುತಿಸಿ, ಭವಿಷ್ಯದ ತಂತ್ರಜ್ಞಾನಗಳ ಕುರಿತು ಆಳವಾದ ಅಧ್ಯಯನ ನಡೆಸಬೇಕು ಎಂದು ಕರೆ ನೀಡಿದರು.
ತಿರುವನಂತಪುರಂ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಪ್ರಾಧ್ಯಾಪಕ ಡಾ.ಚಿನ್ಮಯ್​ ಸಹಾ ಮಾತನಾಡಿ, ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ನೈತಿಕ ಮತ್ತು ಜವಾಬ್ದಾರಿಯುತವಾಗಿ ಬಳಸಬೇಕು. ಎಐ ಒಂದು ಸಹಾಯಕ ಸಾಧನವಾಗಿದ್ದು, ಅದು ಹೊಸ ಆಲೋಚನೆ, ಸೃಜನಶೀಲತೆ ಮತ್ತು ಸ್ವತಂತ್ರ ಚಿಂತನೆ ಕುಂಠಿತಗೊಳಿಸದಿರಲಿ ಎಂದರು.
ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಮಾತನಾಡಿದರು. ಪ್ರೊ.ವೀರೇಶ್​ ಜಿ. ಕಸಬೇಗೌಡರ್​, ಡಾ.ಲಾಯಕ್​ ಅಲಿ, ಡಾ.ಪರಮೇಶ ಎಸ್​.ಪಿ., ಡಾ.ನಾಗರಾಜ ಯಮನಕ್ಕನವರ್​, ಡಾ.ಮಲ್ಲಿಕಾರ್ಜುನ ಆನಂದಳ್ಳಿ, ಪ್ರೊ.ಚಿಂತಲಪುಡಿ ಸುರೇಶ, ಡಾ.ಎಂ.ಪಾಂಡುರಂಗ ಪ್ರಸಾದ್​, ಡಾ.ಅರುಣಕುಮಾರ ಪಾಟೀಲ್​, ಡಾ.ಸಂತೋಷ ಕುಮಾರ ಎ., ಡಾ.ಪೆದ್ದೀಟಿ ಸುಧೀರ, ಡಾ.ಉದಯ ಪಾಟೀಲ್​ ಇತರರಿದ್ದರು. ಪ್ರೊ.ಎಂ.ಅಮರೇಂದ್ರ, ಪ್ರೊ.ಪ್ರಮೋದ ಕುಮಾರ್​ ಸ್ವಾಗತಿಸಿದರು. ಡಾ.ಎನ್​. ಚರಣಪ್ರಧಾನ ವಂದಿಸಿದರು.