ಜಮಖಂಡಿ ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸಿ ಶ್ವೇತಾ ಬೀಡಿಕರ ಮಾತನಾಡಿದರು. ತಹಸೀಲ್ದಾರ್ ಅನೀಲ ಬಡಿಗೇರ ಇದ್ದಾರೆ. 
ರಾಜ್ಯ

ಮತದಾರರ ಪಟ್ಟಿ ನಿಖರತೆಗೆ ಸಹಕರಿಸಿ

ಪ್ರಮುಖ ಮುಖ್ಯಾಂಶಗಳು

  • ಎಸಿ ಶ್ವೇತಾ ಬೀಡಿಕರ ಮನವಿ
  • 20 ಸ್ಥಳಗಳಲ್ಲಿ ಸಹಾಯವಾಣಿ ಕೇಂದ್ರ ಪ್ರಾರಂಭ
ಜಮಖಂಡಿ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಅಂಗವಾಗಿ, ಮತದಾರರು 2002ರ ಮತದಾರರ ಪಟ್ಟಿ ಸೇರಿ ಅಗತ್ಯ ದಾಖಲೆಗಳ ಆಧಾರದ ಮೇಲೆ ಮಾಹಿತಿ ನೀಡಿ ಅರ್ಜಿ ಸಲ್ಲಿಸಬೇಕು ಎಂದು ಎಸಿ ಶ್ವೇತಾ ಬೀಡಿಕರ ತಿಳಿಸಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಅತ್ಯಂತ ನಿಖರಗೊಳಿಸುವ ಉದ್ದೇಶದಿಂದ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ವೇಳೆ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಒದಗಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮತದಾರರಿಗೆ ಅನುಕೂಲವಾಗುವಂತೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗುವುದು. ಮತದಾರರ ಪಟ್ಟಿಗೆ ಸಂಬಂಧಿಸಿದ ಅರ್ಜಿಗಳ ಸಲ್ಲಿಕೆ, ತಿದ್ದುಪಡಿ ಹಾಗೂ ಮಾಹಿತಿ ಪಡೆಯಲು ಸಾರ್ವಜನಿಕರು ಈ ಕೇಂದ್ರಗಳ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ನಡೆಸಲು ಎಲ್ಲ ಬಿಎಲ್‌ಒಗಳು ಹಾಗೂ ಬೂತ್ ಏಜೆಂಟರಿಗೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ತರಬೇತಿ ನೀಡಲಾಗುತ್ತಿದೆ. ತಾಲೂಕಿನ ಒಟ್ಟು 24 ಗ್ರಾಪಂ ಪೈಕಿ ಈಗಾಗಲೇ 12 ಗ್ರಾಪಂಗಳಲ್ಲಿ ತಹಸೀಲ್ದಾರ್ ಮತ್ತು ತಾಪಂ ಇಒ ತರಬೇತಿ ನೀಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಯಾವುದೇ ಅರ್ಹ ವ್ಯಕ್ತಿ ಹೆಸರು ಕೈ ತಪ್ಪದಂತೆ ಹಾಗೂ ಅನರ್ಹ ಹೆಸರುಗಳು ಸೇರ್ಪಡೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಗ್ರಾಮದ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳದ ಯುವಕರು ಸ್ವಯಂಪ್ರೇರಿತರಾಗಿ ಈ ಕಾರ್ಯದಲ್ಲಿ ಭಾಗವಹಿಸಲು ಮುಂದೆ ಬಂದರೆ ಅವರಿಗೂ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.
ಬಿಎಲ್‌ಒಗಳು ನೀಡುವ ಅರ್ಜಿಗಳನ್ನು ಪ್ರತಿಯೊಬ್ಬ ಮತದಾರರು ಭರ್ತಿ ಮಾಡಿ ಕೊಡಬೇಕು.
ಅರ್ಜಿ ಪಡೆದು ವಾಪಸ್ ನೀಡದಿದ್ದರೆ ಅವರನ್ನು ವಿಚಾರಣೆಗೆ ಕರೆದು ದಾಖಲೆ ಪರಿಶೀಲಿಸಲಾಗುವುದು. ಬಿಎಲ್‌ಒಗಳು ಮನೆಗೆ ಭೇಟಿ ನೀಡಿದ ಸಮಯದಲ್ಲಿ ಬೀಗ ಹಾಕಿದ್ದರೆ, ಒಟ್ಟು ಮೂರು ಬಾರಿ ಬಂದು ಹೋಗುತ್ತಾರೆ. ಆದಾಗ್ಯೂ ಮನೆ ಬಾಗಿಲು ಹಾಕಿದ್ದರೆ, ಬಾಗಿಲಿಗೆ ಪರ್ಪಲ್ (ನೇರಳೆ) ಬಣ್ಣದ ಸ್ಟಿಕ್ಕರ್ ಅಂಟಿಸಿ, ಅವರನ್ನು ಪತ್ತೆಹಚ್ಚಿ ಅರ್ಹ ಅಥವಾ ಅನರ್ಹತೆಯ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕ್ಷೇತ್ರದಲ್ಲಿ ಒಟ್ಟು 23,006 ಮತದಾರರಿದ್ದಾರೆ. ಈ ಪೈಕಿ ಅಂದಾಜು 1500 ಮತದಾರರು ಮ್ಯಾಪಿಂಗ್ ಆಗುತ್ತಿಲ್ಲ ಎಂದರು. ಜಮಖಂಡಿ ನಗರದ 31 ವಾರ್ಡ್‌ಗಳ ಪೈಕಿ 20 ಸ್ಥಳಗಳಲ್ಲಿ ಮತದಾರರ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.
ಪ್ರತಿ ಪೋಲಿಂಗ್ ಸ್ಟೇಷನ್‌ನಲ್ಲಿ ಮತದಾರರ ಸಂಖ್ಯೆ 1200 ಮೀರದಂತೆ ಪುನರ್ ರಚಿಸಲಾಗುವುದು ಎಂದರು. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಅವರು ಕೋರಿದರು.
ತಹಸೀಲ್ದಾರ್ ಅನೀಲ ಬಡಿಗೇರ, ಗ್ರೇಡ್-2 ತಹಸೀಲ್ದಾರ್ ಬಸವರಾಜ ಸಿಂಧೂರ, ಕಂದಾಯ ನಿರೀಕ್ಷಕ ಮಂಜುನಾಥ ದೊಡ್ಡಮನಿ, ಅಶ್ಪಾಕ್ ಮೇಸಿ, ಮಹಾದೇವ ಕುರಂದವಾಡ ಇದ್ದರು.