ವಿಜಯಪುರದ ಸಿದ್ಧೇಶ್ವರ ದೇವಸ್ಥಾನ ಬಳಿ ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಜಾಗೃತಿ ಜಾಥಾಗೆ ಗಣ್ಯರು ಚಾಲನೆ ನೀಡಿದರು. ಖಾದರ್ ಸಾಬ್ ಹುಸೇನ್ ಸಾಬ್ ಬೆನಕಟ್ಟಿ, ಅರವಿಂದ ಹಾಗರಗಿ, ರಾಜೇಶ್ವರಿ ಗೋಲಗೇರಿ ಮತ್ತಿತರರಿದ್ದಾರೆ.
- ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಹೇಳಿಕೆ
- ವಿಶ್ವ ತಂಬಾಕು ರಹಿತ ದಿನಾಚರಣೆ ಬೃಹತ್ ಜಾಗೃತಿ ಜಾಥಾ
ವಿಜಯಪುರ: ಯುವಜನತೆ ದುಶ್ಚಟಗಳಿಂದ ದೂರವಿರಬೇಕು. ತಂಬಾಕು ಸೇವನೆ ತ್ಯಜಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ್ ಎಸ್. ಹಾಗರಗಿ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಕಲಬುರಗಿಯ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಸ್ಥಳೀಯ ನಾಗೂರ ನಸಿರ್ಂಗ್ ಕಾಲೇಜು ಸೇರಿ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಭವ್ಯ ಭಾರತ ದೇಶದ ಭವಿಷ್ಯ. ಯುವ ಜನತೆ ಯಾವುದೇ ಕಾರಣಕ್ಕೂ ಧೂಮಪಾನ, ತಂಬಾಕು ಸೇವನೆ ಅಂತಹ ಮಾರಕ ದುಶ್ಚಟಗಳಿಗೆ ಬಲಿಯಾಗದೆ, ತಮ್ಮ ಜೀವನವನ್ನು ಶಿಸ್ತುಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರಲ್ಲದೇ, ತಂಬಾಕು ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದಿದೆ ಎಂದರು.
ಜಿಲ್ಲಾ ಆಸ್ಪತ್ರೆಯ ಡಾ. ಎಂ.ಟಿ.ಆರ್. ಕೋತ್ವಾಲ್ ವಿಶೇಷ ಉಪನ್ಯಾಸ ನೀಡಿ, ಕ್ಯಾನ್ಸರ್ ಮಹಾಮಾರಿಯಾಗಿ ಬೆಳೆಯುವ ಮುನ್ನವೇ ನಾವು ಜಾಗರೂಕರಾಗಿರಬೇಕು. ಆರಂಭಿಕ ಹಂತದಲ್ಲೇ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಗತ್ಯ. ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಕೇವಲ ತಾವಷ್ಟೇ ಜಾಗೃತರಾಗದೇ ತಮ್ಮ ಪಾಲಕರು, ಸ್ನೇಹಿತರು ಮತ್ತು ಸಂಬಂಧಿಕರಲ್ಲೂ ನೆರೆ-ಹೊರೆಯವರಲ್ಲಿಯೂ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.
ಮನೋವೈದ್ಯ ಡಾ. ಮಂಜುನಾಥ ಮಸಳಿ ಮಾತನಾಡಿ, ದುಶ್ಚಟಗಳಿಂದ ಮುಕ್ತವಾದ ಉತ್ತಮ ಜೀವನ ಸಾಗಿಸಬೇಕು ಎಂದು ಹೇಳಿದರು.
ಕಲಬುರಗಿಯ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ವಿಭಾಗದ ಪ್ರತಿನಿಧಿ ಗುರುರಾಜ್ ಕುಲಕರ್ಣಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳಿಂದ ದೂರವಿರುವಂತೆ ಹಾಗೂ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.
ಅದಕ್ಕೂ ಮುನ್ನ ಇಲ್ಲಿನ ಶ್ರೀ ಸಿದ್ಧೇಶ್ವರ ದೇವಸ್ಥಾನ ಬಳಿ ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಜಾಗೃತಿ ಜಾಥಾಕ್ಕೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಖಾದರ್ ಸಾಬ್ ಹುಸೇನ್ ಸಾಬ್ ಬೆನಕಟ್ಟಿ, ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಮತ್ತು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಡಾ. ರಾಜೇಶ್ವರಿ ಗೋಲಗೇರಿ ಹಸಿರು ನಿಶಾನೆ ತೋರಿಸಿ ಜಂಟಿಯಾಗಿ ಚಾಲನೆ ನೀಡಿದರು.
ಜಾಗೃತಿ ಜಾಥಾವು ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿತು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್. ಭಗವಾನ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ. ಕೋಳೂರು, ಪ್ರಕಾಶ ಚವಾಣ್, ಶ್ರೀಕಾಂತ ಪೂಜಾರ ಮತ್ತಿತರರಿದ್ದರು.