ವಿರಾಜಪೇಟೆಯ ಸರ್ಕಾರಿ ಪದವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್.ಕೆ ಶಾಂತಿ, ಅನುಪ್ ಮಾದಪ್ಪ, ಪ್ರೊ.ಸರಸ್ವತಿ, ಕೆ.ಬಸವರಾಜು, ನಿರ್ಮಲಾ ಇದ್ದರು.
- ಪೊಲೀಸ್ ವೃತ್ತ ನಿರೀಕ್ಷಕ ಅನುಪ್ ಮಾದಪ್ಪ
- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ
ಆರಂಭದಲ್ಲಿ ರುಚಿ ನೋಡಲು ಮಾಡುವ ಪ್ರಯತ್ನವೇ ವ್ಯಕ್ತಿಯನ್ನು ಗಾಂಜಾ, ಅಫೀಮು, ಡ್ರಗ್ಸ್‌ನಂತಹ ಮಾದಕ ದ್ರವ್ಯಗಳ ಜಾಲದಲ್ಲಿ ಸಿಲುಕಿಸಿ ಜೀವನವನ್ನೇ ಅಂತ್ಯಗೊಳಿಸುತ್ತವೆ. ಹಾಗಾಗಿ ಮೊದಲ ಪ್ರಯತ್ನವನ್ನೇ ಮಾಡದೆ ಧೈರ್ಯದಿಂದ ನೋ ಎನ್ನಿರಿ ಎಂದು ಪೊಲೀಸ್ ವೃತ್ತ ನಿರೀಕ್ಷಕ ಅನುಪ್ ಮಾದಪ್ಪ ಹೇಳಿದರು.
ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ಕೇಂದ್ರ, ಕೊಡಗು ಘಟಕ ಮತ್ತು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ಸ್ ಘಟಕದ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಶಾಮುಕ್ತ ಯುವ ವಿಕಸಿತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾದಕ ವ್ಯಸನಿಗಳನ್ನು ಸಮಾಜ, ಕುಟುಂಬ ಒಪ್ಪುವುದಿಲ್ಲ. ಒಮ್ಮೆ ಕಾನೂನಿನಡಿ ಬಂಧಿತರಾದರೆ ಭವಿಷ್ಯವೇ ನಾಶಗೊಳ್ಳುತ್ತದೆ. ಹಾಗಾಗಿ ಡ್ರಗ್ಸ್‌ಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಸಮೂಹ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಎನ್.ಕೆ ಶಾಂತಿ ಮಾತನಾಡಿ, ಆಸ್ಪತ್ರೆಗೆ ದಾಖಲಾಗುವ ಯುವಜನರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ದುಶ್ಚಟಗಳಿಗೆ ದಾಸರಾಗಿ ಮಧ್ಯ ವಯಸ್ಸಿಗೆ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲೆ ಪ್ರೊ.ಡಿ.ಕೆ.ಸರಸ್ವತಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಕನಸು ಕಾಣುವಂತಾಗಬೇಕು. ಓದಿನಲ್ಲಿ ನಿರತರಾಗುವ ಮೂಲಕ ಶಿಸ್ತು ರೂಢಿಸಿಕೊಳ್ಳಬೇಕು ಎಂದರು.
ಜಿಲ್ಲಾ ಯುವಜನ ಅಧಿಕಾರಿ ಟಿ.ಅಖಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸಮೂಹ ಗೀತೆ, ಸಮೂಹ ನೃತ್ಯ, ರೀಲ್ಸ್ ,ಕಿರುಚಿತ್ರ ರಚನೆ, ಕವನ ವಾಚನ, ಭಾಷಣ ಸ್ಪರ್ಧೆ, ಘೋಷಣ ವಾಕ್ಯ ಬರಹ, ಚಿತ್ರಕಲೆ ಸ್ಪರ್ಧೆಗಳ ಮುಖೇನ ಜನಜಾಗೃತಿ ಮೂಡಿಸಿದರು.
ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು. ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು. ಎರಡೂ ಕಾಲೇಜಿನ ತಂಡಗಳು ಮುಂದಿನ ಸುತ್ತಿನಲ್ಲಿ ಆಯೋಜಿಸಲ್ಪಡುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿವೆ.