ರಾಜ್ಯದಲ್ಲಿ ಬಿತ್ತನೆ ಕಾರ್ಯಚಟುವಟಿಕೆಗಳು ಬಿರುಸು  
ರಾಜ್ಯ

ರಾಜ್ಯದಲ್ಲಿ ಮುಂದುವರಿದ ಮಳೆ: ಬಿತ್ತನೆ ಕಾರ್ಯ ಚುರುಕು-Monsoon Rain

ಬೆಂಗಳೂರು: ಮಳೆ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿತ್ತನೆ ಕಾರ್ಯಚಟುವಟಿಕೆಗಳು ಬಿರುಸುಗೊಂಡಿವೆ.
ಅನ್ನದಾತರಿಗೆ ಬೀಜ ಬಿತ್ತಲು ರೋಹಿಣಿ ಮಳೆಯಾಗಬೇಕಿತ್ತು. ಆದರೆ, ಈ ಬಾರಿ ರೋಹಿಣಿ ಮಳೆ ಕೈಕೊಟ್ಟರೂ ಮೃಗಶಿರಾ ಮಳೆ ಉತ್ತಮವಾಗಿ ಸುರಿದ ಕಾರಣ ರೈತ ಸಂಪರ್ಕ ಕೇಂದ್ರದಿಂದ ಬೀಜ, ರಸಗೊಬ್ಬರ ಖರೀದಿಸಿರುವ ರೈತರು ಹರ್ಷದಿಂದ ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ. ಮೆಕ್ಕೆಜೋಳ, ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಮತ್ತು ತಂಬಾಕು ಸೇರಿ ವಿವಿಧ ಬೀಜಗಳ ಬಿತ್ತನೆ ಮಾಡಲಾಗುತ್ತಿದೆ.
ಬೆಂಗಳೂರು ನಗರ ಸೇರಿ ಪಶ್ಚಿಮಘಟ್ಟ ಮತ್ತು ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಶನಿವಾರವೂ ಉತ್ತಮ ವರ್ಷಧಾರೆಯಾಗಿತ್ತು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಜೂ 14ರಂದು ಜೋರು ಮಳೆಯಾಗುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಈ ಮೇಲಿನ ಜಿಲ್ಲೆಗಳಲ್ಲಿ ಜೂ 15ರಿಂದ ಮುಂದಿನ 5 ದಿನ ಸಾಧಾರಣ ಮಳೆ ಸುರಿಯಲಿದೆ.
ಕರಾವಳಿ ಭಾಗಗಳಲ್ಲಿ ಗಾಳಿ ವೇಗ ಹೆಚ್ಚಿರುವುದರಿಂದ ಸಮುದ್ರ ತೀರದ ಪ್ರದೇಶಗಳಲ್ಲಿ ಸಾರ್ವಜನಿಕರು ಸೇರಿ ಮೀನುಗಾರರಿಗೆ ತೆರಳದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು ಮತ್ತು ಹಾಸನ ಸೇರಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ 5 ದಿನ ಲಘು ಪ್ರಮಾಣದಲ್ಲಿ ಮಳೆಯಾಗಲಿದೆ.