ಬಸವನಗುಡಿಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ಶನಿವಾರ ಗುರುಪಾದ ಬೇಲೂರು ರಚನೆಯ ‘ಅನಾತ್ಮ’ ಕಾದಂಬರಿ ಬಿಡುಗಡೆ
- ಗುರುಪಾದ ಬೇಲೂರು ರಚನೆಯ ‘ಅನಾತ್ಮ’ ಕಾದಂಬರಿಯನ್ನು ಬಿಡುಗಡೆ
- ಕಾವ್ಯಗಳು, ಕಲಾಕೃತಿಗಳು ಮತ್ತು ಸಾಹಿತ್ಯ ಕೃತಿಗಳ ಬಗೆಗಿನ ಸಂವೇದನೆಯನ್ನು ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ನಾವೆಲ್ಲರೂ ಸಂವೇದನೆಯನ್ನು ಹೆಚ್ಚಿಸಲು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಿದೆ
- ಇಲ್ಲವಾದಲ್ಲಿ, ಭಾಷೆ, ಸಂವೇದನೆ ಮತ್ತು ಪರಂಪರೆ, ಸಂಸ್ಕೃತಿಯ ಸಾವಾಗಲಿದೆ ಎಂದು ಆತಂಕ
ಬೆಂಗಳೂರು: ಕನ್ನಡ, ಸಂಸ್ಕೃತಿ, ತಮಿಳು ಸೇರಿ ಯಾವುದೇ ಸಾಹಿತ್ಯವು ವಿವೇಕವನ್ನು ನೀಡಿದೆ. ಆದರೆ, ಕಾವ್ಯಗಳಲ್ಲಿರುವ ವಿವೇಕವನ್ನು ಅರಗಿಸಿಕೊಳ್ಳಲಾರದಷ್ಟು ಸಂವೇದನೆಯನ್ನು ಸಮಕಾಲೀನ ಸಮಾಜವು ಕಳೆದುಕೊಂಡಿರುವುದು ದುರಂತ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.
ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (ವಾಡಿಯಾ ಸಭಾಂಗಣ)ನಲ್ಲಿ ಶನಿವಾರ ಗುರುಪಾದ ಬೇಲೂರು ರಚನೆಯ ‘ಅನಾತ್ಮ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಲಾಕೃತಿಗಳನ್ನು ಹೇಗೆ ಓದಬೇಕೆಂದು ಗೊತ್ತಿಲ್ಲ. ಅವುಗಳನ್ನು ಇತಿಹಾಸ ಮಾಡುತ್ತೇವೆ. ಕಾವ್ಯಗಳು, ಕಲಾಕೃತಿಗಳು ಮತ್ತು ಸಾಹಿತ್ಯ ಕೃತಿಗಳ ಬಗೆಗಿನ ಸಂವೇದನೆಯನ್ನು ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ನಾವೆಲ್ಲರೂ ಸಂವೇದನೆಯನ್ನು ಹೆಚ್ಚಿಸಲು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಿದೆ. ಇಲ್ಲವಾದಲ್ಲಿ, ಭಾಷೆ, ಸಂವೇದನೆ ಮತ್ತು ಪರಂಪರೆ, ಸಂಸ್ಕೃತಿಯ ಸಾವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಎಲ್ಲ ಕಾದಂಬರಿಗಳು ನಾಯಕ ಪ್ರಧಾನವಾಗಿರುತ್ತವೆ. ಆದರೆ, ಈ ಕಾದಂಬರಿಯಲ್ಲಿ ನಾಯಕ ಸತ್ತುಹೋದ ಮೇಲೆಯೇ ಕತೆ ಆರಂಭವಾಗಲಿದೆ. ಆದ್ದರಿಂದ ಮರುಕಲ್ಪನೆ ಮಾಡಿಕೊಂಡು ಈ ಕಾದಂಬರಿಯನ್ನು ಓದಬೇಕಿದೆ. ಭೂತ, ಭವಿಷ್ಯ ಮತ್ತು ವರ್ತಮಾನ ಸೇರಿ ಈ ಕಾದಂಬರಿ ಮೂಡಿಬಂದಿದೆ. ತಾಂತ್ರಿಕವಾಗಿ ಬಹಳ ಬಲಿಷ್ಠವಾಗಿದೆ. ವಸ್ತುವಿನ ದೃಷ್ಟಿಯಿಂದ ಆತ್ಮ, ಅನಾತ್ಮ, ವೈಜ್ಞಾನಿಕ ಮತ್ತು ಧಾರ್ಮಿಕ ವಿಷಯಗಳಿವೆ. ಮನುಷ್ಯ ಸತ್ತುಹೋದಾಗ ಅಂತಿಮವಾಗಿ ಬಿಟ್ಟು ಹೋದದ್ದು ಏನು ಎಂಬ ಶಾಶ್ವತವಾದ ಪ್ರಶ್ನೆಯನ್ನು ಕಾದಂಬರಿಯು ನಮ್ಮಮುಂದಿಡಲಿದೆ ಎಂದು ಹೇಳಿದರು.
ಪತ್ರಕರ್ತ ಚ.ಹ. ರಘನಾಥ ಮಾತನಾಡಿ, ಭೈರಪ್ಪನವರ ನಾಯಿನೆರಳು, ನಿರಾಕರಣ ಮತ್ತು ಕಾರಂತರ ಬೆಟ್ಟದ ಜೀವಗಳನ್ನು ಈ ಕೃತಿ ಹೋಲುತ್ತದೆ. ಆ ಕೃತಿಗಳ ನೆರಳಾಗಿ ಉಳಿಯದೆ ತನ್ನ ಸ್ವಂತಿಕೆಯನ್ನು ಸಾಧಿಸುತ್ತದೆ. ಆ ಎಲ್ಲ ಕೃತಿಗಳಿಗಿಂತಲೂ ಭಿನ್ನವಾಗಿ ನಿಲ್ಲಲ್ಲಿದೆ. ಒಂದು ಹಂತದಲ್ಲಿ ಥ್ರಿಲ್ಲರ್, ಮತ್ತೊಂದು ಹಂತದಲ್ಲಿ ಕುತೂಹಲ, ಮಗದೊಂದು ಹಂತದಲ್ಲಿ ಸಾಮಾಜಿಕ, ಆಧ್ಯಾತ್ಮಿಕ, ವೈಜ್ಞಾಜಿಕವಾಗಿ ಸೈನ್ಸ್ ಫಿಕ್ಸನ್‌ನಂತೆ ಮೂಡಿಬಂದಿರುವ ಕೃತಿಯಾಗಿದ್ದು, ಒಂದು ರೀತಿಯಲ್ಲಿ ನವರಸಗಳಿಂದ ಕೂಡಿದೆ ಎಂದರು.
ಕಾರ್ಯಕ್ರಮದಲ್ಲಿ ಹೊಸತು ಸಂಪಾದಕ ಡಾ. ಸಿದ್ಧನಗೌಡ ಪಾಟೀಲ್ ಮತ್ತು ಮುಖ್ಯಮಂತ್ರಿಗಳ ಗೌರವ ವೈದ್ಯಕೀಯ ಕಾರ್ಯದರ್ಶಿ ಡಾ. ಎಚ್. ರವಿಕುಮಾರ್ ಉಪಸ್ಥಿತರಿದ್ದರು.